ಕಾಳಿದಾಸ

 ಸು. 4ನೆಯ ಶತಮಾನ. ಸಂಸ್ಕøತ ಸಾಹಿತ್ಯದಲ್ಲಿ ಕವಿಕುಲಗುರು ಎಂಬ ಪ್ರಶಸ್ತಿಗೆ ಪಾತ್ರನಾದ ಕವಿ; ಕವಿತಾಮಾಧುರ್ಯ ಮತ್ತು ಪ್ರತಿಭೆಗಳಿಂದ ವಿಶ್ವಕವಿಗಳ ಶ್ರೇಣಿಯಲ್ಲಿ ಸೇರಿರುವಂಥವ. ಇಷ್ಟು ಪ್ರಸಿದ್ಧವಾದವನ ಕಾಲ ನಮಗೆ ನಿಶ್ಚಿತವಾಗಿ ತಿಳಿಯದಿರುವುದು ಸೋಜಿಗ ಸಂಗತಿ. ಆಧುನಿಕ ಪಂಡಿತರು ಈ ವಿಷಯದಲ್ಲಿ ಶೋಧನೆ ನಡೆಸಿ ವಿಧವಿಧವಾದ ಅಭಿಪ್ರಾಯಗಳನ್ನು ಕೊಟ್ಟಿದ್ದಾರೆ. ಇವನ ಕಾಲ ಕ್ರಿ.ಪೂ. ಮೊದಲ ಶತಮಾನವೆಂದು ಕೆಲವರೂ ಕ್ರಿ.ಶ. ಎರಡನೆ ಶತಮಾನವೆಂದು ಕೆಲವರೂ ನಾಲ್ಕನೆಯದೆಂದು ಕೆಲವರೂ ಆರನೆಯದೆಂದು ಮತ್ತೆ ಕೆಲವರೂ ಹೇಳುತ್ತಾರೆ, ಅಂತೂ ಚಂದ್ರಗುಪ್ತ ವಿಕ್ರಮಾದಿತ್ಯನ (ಕ್ರಿ.ಶ. 357-413) ಆಸ್ಥಾನದಲ್ಲಿದ್ದನೆಂದು ಹೇಳುವುದು ಬಹುಜನ ಪಂಡಿತರ ಮತವಾಗಿದೆಯಲ್ಲದೆ ಸಮಂಜಸವಾಗಿಯೂ ತೋರುತ್ತದೆ. ಈ ಚಂದ್ರಗುಪ್ತ ಉಜ್ಜಯಿನಿಯಲ್ಲಿ ಆಳುತ್ತಿದ್ದನಾದುದರಿಂದಲೂ ಕವಿಯ ಕಾವ್ಯಗಳಲ್ಲಿ ಈ ನಗರದ ಬಗ್ಗೆ ವಿಶೇಷ ಅಭಿಮಾನ ವ್ಯಕ್ತಪಟ್ಟಿರುವುದರಿಂದಲೂ ಉಜ್ಜಯಿನಿ ಕಾಳಿದಾಸನ ವಾಸ ಸ್ಥಳವಾಗಿದ್ದಿರಬೇಕೆಂದು ಹೇಳಬಹುದು. ಇಂಥ ಊಹೆಗಳನ್ನು ಬಿಟ್ಟರೆ ಇವನ ವೈಯಕ್ತಿಕ ವಿಷಯಗಳ ವಿಚಾರಗಳೇನೂ ನಮಗೆ ತಿಳಿದಿಲ್ಲ. ಇವನ ಕೃತಿಗಳು ಏಳು : ಎರಡು ಖಂಡಕಾವ್ಯಗಳು-ಋತುಸಂಹಾರ ಮತ್ತು ಮೇಘಸಂದೇಶ ; ಎರಡು ಮಹಾಕಾವ್ಯಗಳು-ಕುಮಾರ ಸಂಭವ ಮತ್ತು ರಘುವಂಶ : ಮೂರು ನಾಟಕಗಳು-ಮಾಲವಿಕಾಗ್ನಿ ಮಿತ್ರ, ವಿಕ್ರಮೋರ್ವಶೀಯ ಮತ್ತು ಅಭಿಜ್ಞಾನ ಶಾಕುಂತಲ. 

 ಕಾಳಿದಾಸನ ಕೃತಿಗಳು ಸರ್ವತೋಪೂರ್ಣವಾಗಿವೆ, ಸರ್ವಾಂಗ ಸುಂದರವಾಗಿವೆ. ಇದು ಹೆಚ್ಚು ಇದು ಕಡಿಮೆ ಎನ್ನುವಂತಿಲ್ಲ. ಲಾಕ್ಷಣಿಕರ ಎಲ್ಲೆಯಲ್ಲಿಯೇ ಇದ್ದರೂ ಕವಿ ಅದರಿಂದ ಬದ್ಧನಾಗಿಲ್ಲ. ಕಾವ್ಯಕ್ಕೆ ಬೇಕಾದುದೆಲ್ಲಕ್ಕೂ ಇವನಲ್ಲಿ ಉದಾಹರಣೆಗಳಿವೆ. ಯಾವುದೂ ಅತಿಯಾಗಿಲ್ಲ. ವಸ್ತುವಿನ್ಯಾಸ, ಪಾತ್ರಸೃಷ್ಟಿ. ತಕ್ಕ ಮಾತು, ತಕ್ಕ ಶಬ್ದಜಾಲ-ಎಲ್ಲದರಲ್ಲೂ ಪರಸ್ಪರ ಔಚಿತ್ಯ ತಾನೇತಾನಾಗಿದೆ. ಇಂಥ ಅದ್ಭುತ ಪ್ರತಿಭಾಪೂರ್ಣನಾದ್ದರಿಂದಲೆ ಕಾಳಿದಾಸ ಭಾರತದ ಪ್ರಾಚೀನ ಹಾಗೂ ಆಧುನಿಕ ವಿಮರ್ಶಕರಿಂದ ಮಾತ್ರವಲ್ಲದೆ, ವಿಶ್ವದ ಪಂಡಿತರಿಂದಲೂ ಮೆಚ್ಚುಗೆಯನ್ನು ಪಡೆದಿದ್ದಾನೆ.           (ಎಸ್.ಆರ್.ಎ.)

 ಋತುಸಂಹಾರ: ಇದೊಂದು ಕತೆಯಿಲ್ಲದ ಕಾವ್ಯ. ಬಹುಶಃ ಇದು ಕಾಳಿದಾಸ ಬರೆದ ಕಾವ್ಯಗಳಲ್ಲಿ ಮೊದಲನೆಯದು. ಇದರಲ್ಲಿ ಒಂದೊಂದು ಋತುವಿಗೆ ಒಂದೊಂದು ಸರ್ಗದಂತೆ ಆರು ಸರ್ಗಗಳಿವೆ. ಒಟ್ಟು ಶ್ಲೋಕಗಳ ಸಂಖ್ಯೆ 114. ಇಂದ್ರವಜ್ರ, ವಂಶಸ್ಥ, ವಸಂತತಿಲಕ, ಮಾಲಿನೀ ಮತ್ತು ಶಾರ್ದೂಲವಿಕ್ರೀಡಿತ-ಇವು ಇಲ್ಲಿ ಬಳಸಿರುವ ವೃತ್ತಗಳು. ಈ ಕಾವ್ಯಕ್ಕೆ ಅಲಂಕಾರಿಕರೂ ಪಂಡಿತರೂ ಹೆಚ್ಚು ಪ್ರಾಶಸ್ತ್ಯ ಕೊಟ್ಟಿರುವಂತೆ ಕಂಡುಬರುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಈ ಪದ್ಯಗಳ ಸರಳತೆ. ಈ ಕಾವ್ಯದಲ್ಲಿ ಭಾವಗಾರಿಕೆಗಿಂತ ಬಣ್ಣಗಾರಿಕೆ ಹೆಚ್ಚು. ಋತುಗಳಲ್ಲೂ ಈ ಲೋಕ ಯಾವ ಯಾವ ಚೆಲುವನ್ನು ತಳೆದು ಯಾವ ಯಾವ ಸೊಗಸುಗಳನ್ನು ರಸಿಕರಿಗೆ ನೀಡುತ್ತದೆ ಎಂಬುದರ ವರ್ಣನೆಯನ್ನು ಈ ಕಾವ್ಯ ಮನೋಹರವಾಗಿ ನಿರ್ವಹಿಸುತ್ತದೆ. ಆರು ಸರ್ಗಗಳಲ್ಲಿ ಕವಿ ಆರು ಋತುಗಳನ್ನು ವರ್ಣಿಸುತ್ತಾನೆ. ಇಡೀ ಕಾವ್ಯದಲ್ಲಿ ಪ್ರಿಯಪ್ರೇಯಸಿಯರ ದೃಷ್ಟಿ ಇರುವುದಲ್ಲದೆ ಪ್ರತಿಪದ್ಯವೂ ಪ್ರಿಯ ಪ್ರೇಯಸಿಗೆ ಹೇಳಿದಂತೆ ರಚನೆಗೊಂಡಿದೆ. ಮೊದಲು ಗ್ರೀಷ್ಮದ ವರ್ಣನೆ-ಕಾವ್ಯ ವಸಂತದಲ್ಲಿ ಮುಗಿಯಲೆಂದು, ಸೂರ್ಯನೀಗ ಪ್ರಚಂಡ; ಚಂದ್ರ ಸ್ಪøಹಣೀಯ. ಸಂಜೆಗಳು ತುಂಬ ಅಂದ. ಸ್ತ್ರೀಪುರುಷರಲ್ಲಿ ಕಾಮ ಪ್ರಬಲಿಸುತ್ತಿಲ್ಲ. ಬಿಸಿಲ ಬೇಗೆಯ ಈ ಸರ್ವಸಂಕಟ ಸಮಯದಲ್ಲಿ ಎಲ್ಲ ಪ್ರಾಣಿಗಳೂ ತಮ್ಮ ತಮ್ಮ ವೈರವನ್ನು ಮರೆತಿವೆ. ಆಗ ಮೋಡಗಳ ಮದ್ದಾನೆಗಳಿಂದಲೂ ಮಿಂಚಿನ ಪತಾಕೆಗಳಿಂದಲೂ ಗುಡುಗಿನ ಮದ್ದಳೆಗಳಿಂದಲೂ ಕೂಡಿದವನಾಗಿ ರಾಜಠೀವಿಯಲ್ಲಿ ಕಾಮಿಜನಪ್ರಿಯನೂ ಸಸ್ಯಬಂಧುವೂ ಪ್ರಾಣಿಗಳಿಗೆ ಪ್ರಾಣಭೂತನೂ ಆದ ವರ್ಷಋತುರಾಜ ಬಂದ. ಕಾರ್ಮುಗಿಲುಗಳಲ್ಲಿ ಕೆಲವು ಕನ್ನೈದಿಲೆಗಳಂತೆ, ಕೆಲವು ಕಾಡಿಗೆಯಂತೆ, ಮತ್ತೆ ಕೆಲವು ಗರ್ಭಿಣಿಯರ ಸ್ತನದಂತೆ ಕಪ್ಪಾಗಿವೆ. ಬಿಳುಪು ಹೊರತು ಮಿಕ್ಕೆಲ್ಲ ಬಣ್ಣಗಳನ್ನೂ ಬಯಲೂ ಬನವೂ ಮೆರೆಸುತ್ತಿವೆ. ಗಾಳಿಗೆ ಕಂಪುತಂಪುಗಳನ್ನಿತ್ತು, ಕಾಳ್ಕಿಚ್ಚನ್ನಾರಿಸಿ, ಮಲೆಕೋಡುಗಳಲ್ಲಿ ತಂಗುವ ಮೋಡಗಳು ವಿರಹಿಗಳಲ್ಲಿ ಮಾತ್ರ ದಗೆಯೆಬ್ಬಿಸುತ್ತದೆ. ಕಾಶಕುಸುಮಗಳು ಬಿಳಿಸೀರೆಯನ್ನುಟ್ಟು ಪದ್ಮವಕ್ತ್ರೆಯಾಗಿ ಕಲಹಂಸ ಕೂಜಿತಗಳ ನೂಪುರ ಧ್ವನಿಯನ್ನು ಹರಡುತ್ತ ಮಾಗಿದ ನೆಲ್ತೆನೆಗಳ ತನುಕಾಂತಿಯನ್ನು ಮೆರೆಸುತ್ತ ಬಳುಕು ಮೈಯ ಶರತ್ಸುಂದರಿ ಬರುತ್ತಾಳೆ. ಈಗ ಹೆಂಗಸರ ಹುಬ್ಬಿನ ಮುರಿತಗಳಿಗಿಂತ ಹೊಳೆದೆರೆಗಳ ಮುರಿತ ಚೆನ್ನು, ಇಗೋ ಹಿಮಗಾಲ, ಹೆಂಗಸರೆಲ್ಲ ತಮ್ಮೊಡವೆಗಳನ್ನೆಲ್ಲ ಕಳೆದಿಟ್ಟು ಜಾಯಿಕಾಯಿ ಗಂಧವನ್ನು ಲೇಪಿಸಿಕೊಂಡು ಪ್ರಿಯರನ್ನೊಡಗೂಡುವ ಸಂಭ್ರಮದಲ್ಲಿದ್ದಾರೆ. ಒಲಿದವರ ಕೂಟಕ್ಕೆ ಚಳಿಗಾಲಕ್ಕಿಂತ ಇನಿಗಾಲವಿಲ್ಲ. ಆದರೆ ಬೇಟಕ್ಕೋ ವಸಂತ ಕಾಲ: ಇದರ ಬಣ್ಣವೇ ಬೇರೆ, ಬೆಡಗೇ ಬೇರೆ. ಹೀಗೆ ಬೇಸಗೆಯಲ್ಲಿ ಮೊದಲಾಗಿ ಸುಗ್ಗಿಯಲ್ಲಿ ಈ ಕಾವ್ಯ ಮುಗಿಯುತ್ತದೆ.

 ವಸಂತದ ಬರುವನ್ನು ಪ್ರಿಯಪ್ರೇಯಸಿಗೆ ಹೀಗೆ ಬಣ್ಣಿಸುತ್ತಾನೆ:

 ಪ್ರಫುಲ್ಲ ಚೂತಾಂಕುರ ತೀಕ್ಷ್ಣಸಾಯಕೋ ದ್ವಿರೇಫಮಾಲಾ ವಿಲಸದ್ಧನುರ್ಗುಣಃ

 ಮನಾಂಸಿ ಛೇತ್ತುಂ ಸುರತಪ್ರಸಂಗಿನಾಂ ವಸಂತಯೋದ್ಧಾ ಸಮುಪಾಗತಃ ಪ್ರಿಯೇ

 ಅರಳಿದ ಮಾವಿನ ಚಿಗುರುಗಳ ತೀಕ್ಷ್ಣ ಬಾಣಗಳೊಂದಿಗೆ ದುಂಬಿಸಾಲಿನ ಹೆದೆಗಟ್ಟಿದ ಬಿಲ್ಲನ್ನು ಹಿಡಿದು ಪ್ರಣಯಿಗಳ ಮನಸ್ಸನ್ನು ಭೇದಿಸಲು ಅಗೋ ವಸಂತಯೋಧ ಬಂದಿದ್ದಾನೆ, ಪ್ರಿಯೆ!

 ಶೈಲಿ ಇನ್ನೂ ಅಪಕ್ವವಾಗಿಯಾದರೂ ಋತುಸಂಹಾರ ಕಾಳಿದಾಸನಿಗಿರುವ ಪ್ರಕೃತಿ ಪ್ರೇಮವನ್ನು ವಿಶೇಷವಾಗಿ ಹೊರಸೂಸುತ್ತದೆ. ಈ ಕಾವ್ಯದಲ್ಲಿ ಮಾನವ ಭಾವಾವೇಶಗಳಿಗೆ ತಕ್ಕಂತೆ ಪ್ರಕೃತಿಯೂ ಭಾವಾವೇಶ ಹೊಂದುವುದು ಪ್ರತಿಹಾದಿತವಾಗಿದೆ. ಇದರಲ್ಲಿ ಕೇವಲ ಸೂಚಕವಾಗಿ ಬರುವ ಉಪಮೆಗಳು ಮುಂದಿನ ಕಾವ್ಯಗಳಲ್ಲಿ ಬಹಳ ಚಮತ್ಕøತಿ, ಸಂಪೂರ್ಣತೆಗಳಿಂದ ವಿಸ್ತಾರಗೊಂಡಿವೆ.             (ಪಿ.ಟಿ.ಎನ್.)

 ಮೇಘದೂತ: ಅಥವಾ ಮೇಘಸಂದೇಶ ವಿರಹಿಯಾದ ಯಕ್ಷಕನೊಬ್ಬನ ಮನೋವೃತ್ತಿಯನ್ನು ಚಿತ್ರಿಸಿರುವ ಒಂದು ಖಂಡ ಕಾವ್ಯ. ಇದರಲ್ಲಿ ಪೂರ್ವಮೇಘವೆಂದೂ ಉತ್ತರಮೇಘವೆಂದೂ ಎರಡು ಭಾಗಗಳಿವೆ. ಇದರ 115 ಶ್ಲೋಕಗಳೂ ಮಂದಾಕ್ರಾಂತ ವೃತ್ತದಲ್ಲಿದೆ. ಕುಬೇರನ ಸೇವೆಯಲ್ಲಿದ್ದ ಯಕ್ಷನೊಬ್ಬ ತಾನು ಮಾಡಿದ ತಪ್ಪಿಗಾಗಿ ಒಂದು ವರ್ಷ ಕಾಲ ತನ್ನ ಪ್ರಿಯಪತ್ನಿಯನ್ನೂ ನೆಲಸೂರಾದ ಅಲಕಾವತಿಯನ್ನೂ ಬಿಟ್ಟು ಹೊರಗೆ ಹೋಗಬೇಕಾದ ಸಂದರ್ಭ ಒದಗುತ್ತದೆ. ಶಿಕ್ಷೆಯನ್ನನುಭವಿಸಲು ಯಕ್ಷ ವಿಂಧ್ಯ ಪರ್ವತದ ರಾಮಗಿರ್ಯಾಶ್ರಮ ಪ್ರದೇಶದಲ್ಲಿ ವಿರಹ ದುಃಖದಲ್ಲಿ ಸವೆಯುತ್ತಾ ಕಾಲ ಕಳೆಯುತ್ತಿದ್ದ. ಎಂಟು ತಿಂಗಳು ಕಳೆಯಲು ಮಳೆಗಾಲ ಆರಂಭವಾಯಿತು. ಉತ್ತರ ದಿಕ್ಕಿಗೆ ಓಡುತ್ತಿದ್ದ ಮೋಡ ಶಿಖರವೊಂದರ ಮೇಲೆ ತಂಗಿದ್ದಾಗ ವಿರಹಿಯಾದ ಯಕ್ಷ ಅದನ್ನು ಸ್ವಾಗತಿಸಿ ತನ್ನ ಪ್ರಿಯೆಗೆ ತನ್ನ ಸಂದೇಶವನ್ನು ತಲಪಿಸಬೇಕೆಂದು ಬೇಡಿದ. ಅಲಕಾವತಿಗೆ ಮಾರ್ಗನಿರ್ದೇಶ ಮಾಡುವುದೇ ಪೂರ್ವಮೇಘದ ವಸ್ತು. ಇದು ವರ್ಣನಾತ್ಮಕವಾದ ಪೂರ್ವಭಾಗ. ಅಲಕಾವತಿಯಲ್ಲಿ ತನ್ನ ಮನೆಯ ಗುರುತು, ಪ್ರಿಯೆ ಇರಬಹುದಾದ ಸ್ಥಿತಿಯ ವರ್ಣನೆ, ತಲಪಿಸಬೇಕಾದ ಸಂದೇಶ-ಇವು ಉತ್ತರಮೇಘದ ವಸ್ತು.

 ಪೂರ್ವಮೇಘವನ್ನು ವರ್ಣನಾತ್ಮಕ ಗೀತೆಯೆಂದೂ ಉತ್ತರ ಮೇಘವನ್ನು ಉತ್ಕಂಠಾ ಗೀತೆಯೆಂದೂ ಕರೆಯಬಹುದು. ಈ ಕಾವ್ಯದ ಪ್ರತಿಯೊಂದು ಶ್ಲೋಕವೂ ರತ್ಮಪ್ರಾಯವಾಗಿದೆ. ಇಡಿಯ ಗೀತ ಒಂದು ಭವ್ಯ ರತ್ನಮಾಲಿಕೆಯಂತಿದೆ. ವಿರಹಿಯ ದೃಷ್ಟಿಕೋನದಲ್ಲಿ ಪ್ರತಿಪಾದಿತವಾದ ಪ್ರಕೃತಿಯ, ಪಟ್ಟಣಗಳ, ಜನರ, ವರ್ಣನೆಗಳೂ ವಿರಹಿಗಳ ಮನಸ್ಸನ್ನು ವಿಭಜಿಸಿ ಬೇರೆ ಬೇರೆ ವಿಧಗಳಲ್ಲಿ ರೂಪಿಸಿರುವ ಚಿತ್ರಗಳೂ ಅದಕ್ಕೆ ತಕ್ಕ ವಾಗರ್ಥಗಳೂ ಛಂದಸ್ಸೂ ಕಾಳಿದಾಸನ ಅದ್ಭುತ ಕಲಾ ಪ್ರೌಢಿಮೆಗೆ ನಿದರ್ಶನವಾಗಿವೆ. ಆದುದರಿಂದ ವಿಶ್ವದಲ್ಲಿಯೇ ಈ ಲಘು ಕಾವ್ಯ ವಿಸ್ಮಯಕಾರಕ ಪ್ರಣಯಗೀತೆಯೆಂದು ಪ್ರಸಿದ್ಧಿ ಪಡೆದಿದೆ.

(ಎಸ್.ಆರ್.ಎ.)

 ಕುಮಾರಸಂಭವ: ಕಾಳಿದಾಸನಿಗೆ ಸಂಸ್ಕøತ ಮಹಾಕವಿಗಳಲ್ಲಿ ಅಗ್ರಸ್ಥಾನವನ್ನು ದೊರಕಿಸುವುದಕ್ಕೆ ರಘುವಂಶದಷ್ಟೇ ಕುಮಾರಸಂಭವವೂ ಕಾರಣವೆನ್ನಬಹುದು. ಎರಡೂ ಮಹಾಕಾವ್ಯಗಳು. ಎರಡೂ ರಾಷ್ಟ್ರೀಯ ಸಂಸ್ಕøತಿಯನ್ನು ಪ್ರತಿಬಿಂಬಿಸುವ ರನ್ನಗನ್ನಡಿಗಳು. ರಸಭಾವಗಳ ಮಧುರ ನಿರ್ವಹಣೆಯಲ್ಲಿ, ಸಮುಚಿತ ಹಾಗು ಸುಲಲಿತ ಅಲಂಕಾರಗಳ ಸಂಯೋಜನೆಯಲ್ಲಿ, ಪ್ರಕೃತಿಯ ರಮಣೀಯ ಮುಖಗಳ ಹಾಗೂ ಉದಾತ್ತ ಪಾತ್ರಗಳ ಸ್ವಭಾವ ಸುಂದರ ವರ್ತನೆಗಳ ಸಹಜ ಪ್ರತಿಪಾದನೆಯಲ್ಲಿ ಕಾಳಿದಾಸನನ್ನು ಸರಿಗಟ್ಟುವವರು ವಿರಳ. ರಘುವಂಶದ ಆದಿಯಲ್ಲಿ ಕವಿ ವಿನಯವನ್ನು ಪ್ರದರ್ಶಿಸಿರುವಂತೆ ಕುಮಾರಸಂಭವದ ಆದಿಯಲ್ಲಿ ಪ್ರದರ್ಶಿಸಿಲ್ಲ. ಅಲ್ಲಿ ಸೂರ್ಯವಂಶದ ಅನೇಕ ಅರಸರ ವರ್ಣನೆಯಲ್ಲಿ ಕಾವ್ಯ ಬಹುನಾಯಕವೆನಿಸಿದರೆ, ಇಲ್ಲಿ ಜಗತ್ತಿಗೆ ತಾಯ್ತಂದೆಗಳಾದ ಪಾರ್ವತೀಪರಮೇಶ್ವರರ ವಿವಾಹ ಹಾಗು ಪುತ್ರಪ್ರಾಪ್ತಿಯ ಏಕೈಕ ವಸ್ತುವಿದೆ; ಶೃಂಗಾರವೊಂದೇ ಪ್ರಧಾನರಸವಾಗಿದೆ. ಇವುಗಳ ಮೇಲಿಂದಲೂ ಕುಮಾರಸಂಭವದ ಕಾವ್ಯನೈಪುಣ್ಯದ ಆಧಾರದಿಂದಲೂ ಕೆಲವು ವಿದ್ವಾಂಸರು ಇದು ರಘುವಂಶದ ರಚನೆಯ ಅನಂತರ ವಿರಚಿತವಾದುದೆಂದು ಬಗೆದರೆ, ಮತ್ತೆ ಕೆಲವರು ಈ ಕಾರಣಗಳಿಂದಲೇ ಇದನ್ನು ಕಾಳಿದಾಸನ ಮೊದಲ ಮಹಾಕಾವ್ಯವೆಂದು ಪರಿಗಣಿಸುತ್ತಾರೆ. ಇದರ ನಿರ್ಣಯ ಕಷ್ಟ.

 ಕುಮಾರಸಂಭವದಲ್ಲಿ ಹದಿನೇಳು ಸರ್ಗಗಳು ಅಚ್ಚಾಗಿದ್ದರೂ ಮಲ್ಲಿನಾಥನೇ ಮೊದಲಾದ ಹಿಂದಿನವರ ವ್ಯಾಖ್ಯಾನಗಳು ಸಿಕ್ಕುವುದು ಮೊದಲ ಎಂಟು ಸರ್ಗಗಳಿಗೆ ಮಾತ್ರ. ಸಂಸ್ಕøತ ಲಕ್ಷಣಕಾರರು ಕೂಡ 9ರಿಂದ 17ರ ವರೆಗಿನ ಸರ್ಗಗಳಿಂದ ಒಂದು ಉದಾಹರಣೆಯನ್ನು ಕೂಡ ಎತ್ತಿಕೊಂಡಿಲ್ಲ. ಇವನ್ನು ನೋಡಿದರೆ ಕಾಳಿದಾಸ ಮೊದಲ ಎಂಟು ಸರ್ಗಗಳನ್ನು ಮಾತ್ರ ಬರೆದಿರಬೇಕೆಂದು ಊಹಿಸಬೇಕಾಗುತ್ತದೆ. ಎಂಟನೆಯ ಸರ್ಗದಲ್ಲಿ ಪಾರ್ವತೀಪರಮೇಶ್ವರರ ಸಂಭೋಗ ವರ್ಣನೆ ಮಾತ್ರ ಇರುವುದರಿಂದ ಕುಮಾರಸ್ವಾಮಿಯ ಪ್ರತಾಪರ್ಣನೆಯನ್ನು ತಾರಕಾಸುರನ ವಧೆಯವರೆಗೆ ಮುಂದಿನ ಅಜ್ಞಾತ ಕವಿಯೊಬ್ಬ ಬರೆದು ಸೇರಿಸಿದಂತಿದೆ. ಮೊದಲ ಎಂಟು ಸರ್ಗಗಳ ಬಂಧಕೌಶಲ ಹಾಗು ಕಾವ್ಯಗುಣಗಳು ಮುಂದಿನ ಭಾಗದಲ್ಲಿ ಕಾಣುವುದೂ ಇಲ್ಲ.

 ಪಾರ್ವತಿಪರಮೇಶ್ವರರ ಈ ಕಥೆ ರಾಮಾಯಣದಲ್ಲೂ ಶಿವಸ್ಕಾಂದ ಮುಂತಾದ ಪುರಾಣಗಳಲ್ಲೂ ಸಂಗ್ರಹವಾಗಿ ಇಲ್ಲವೆ ವಿಸ್ತಾರವಾಗಿ ಬಂದಿದೆ. ಅಶ್ವಘೋಷನಿಗೂ ಇದರ ಪರಿಚಯವಿತ್ತು. ಕಾಳಿದಾಸ ಯಾವುದೇ ಮೂಲದಿಂದ ಕಥೆಯನ್ನು ಆಯ್ದಿರಲಿ, ತನ್ನದೇ ಆದ ಪ್ರತಿಭೆಯಿಂದ ಈ ಮಹಾಕಾವ್ಯವನ್ನು ನೆಯ್ದಿದ್ದಾನೆ. ವಟುವೇಷದ ಶಿವನಿಗೂ ಪಾರ್ವತಿಗೂ ನಡೆಯುವ ಸಂವಾದ, ಮನ್ಮಥನ ಪ್ರತಾಪ, ರತಿವಿಲಾಪ, ಶಿವಪಾರ್ವತೀವಿಲಾಸ ಇತ್ಯಾದಿ ವರ್ಣನೆಗಳೆಲ್ಲ ಕವಿಪ್ರತಿಭೆಯೇ ಕಲ್ಪಿಸಿರುವ ಕುಸುಮಗಳಾಗಿವೆ.

 ಒಂದನೆಯ ಸರ್ಗದ ಪ್ರಾರಂಭದಲ್ಲಿ ಬರುವ ಹಿಮಾಲಯ ನಗಾಧಿರಾಜನ ವರ್ಣನೆ ಎಷ್ಟೊಂದು ಸಜೀವ ಹಾಗು ಚೇತೋಹಾರಿಯಾಗಿದೆಯೆಂದರೆ ಕಾಶ್ಮೀರವೇ ಕಾಳಿದಾಸನ ಜನ್ಮದೇಶವಾಗಿರಬೇಕೆಂದು ಕೆಲ ವಿದ್ವಾಂಸರು ಇದರ ಮೇಲಿಂದ ಊಹಿಸಿದ್ದಾರೆ. ಕಾಳಿದಾಸನ ಪ್ರತಿಭೆಗೆ ಹಿಮಾಲಯ ಬರಿಯ ಕಲ್ಲು ರಾಶಿಯಲ್ಲ, ಹಿಮದ ಹೆಪ್ಪೂ ಅಲ್ಲ; ಅದು ಭಾರತದ ಭಾಗ್ಯದೇವತೆ; ಪೂರ್ವಪಶ್ಚಿಮ ಸಮುದ್ರಗಳವರೆಗೆ ಮೈಚಾಚಿರುವ ಅಳತೆಗೋಲು; ಆತ ಗಂಗೆ ಪಾರ್ವತಿಯರ ಜನಕ. ಅವನ ಪತ್ನಿ ಮೇನಾದೇವಿ. ಪಾರ್ವತಿಯ ರೂಪಲಾವಣ್ಯಗಳ ವರ್ಣನೆಯ ಸವಿಯನ್ನು ಕಾವ್ಯವನ್ನೊದಿಯೇ ಅರಿಯಬೇಕು. ಉಮೆಯ ಮುಖದ ಮೇಲೆ ಲೀಲೆಯಿಂದಿಳಿದ ಲಾವಣ್ಯದೇವತೆಗೆ ಪದ್ಮದ ಪರಿಮಳವೂ ಚಂದ್ರನ ಕಾಂತಿಯೂ ಒಟ್ಟಿಗೇ ಲಭಿಸಿದುದಂತೆ. ನಾರದನಿಂದ ಈಕೆ ಶಿವನ ಕೈ ಹಿಡಿಯುವಳೆಂಬುದನ್ನರಿತು ಹಿಮವಂತ ಪಾರ್ವತಿಯನ್ನು ಅಲ್ಲಿಯೇ ತಪಗೈಯುತ್ತಿದ್ದ ಶಿವನ ಶುಶ್ರೂಷೆಗೆ ನೇಮಿಸುತ್ತಾನೆ.

 ತಾರಕಾಸುರ ಬ್ರಹ್ಮನ ವರಗಳಿಂದ ಕೊಬ್ಬಿ ಇಂದ್ರಾದಿ ದೇವತೆಗಳಿಗೆ ಕೊಡುತ್ತಿದ್ದ ಹಿಂಸೆಯ ವರ್ಣನೆ ಎರಡನೆಯ ಸರ್ಗದ ವಸ್ತು. ಬೃಹಸ್ಪತಿಯ ನೇತೃತ್ವದಲ್ಲಿ ದೇವತೆಗಳೇ ಬ್ರಹ್ಮನ ಬಳಿಗೆ ಬಂದು ಗೋಳಿಡುತ್ತಾರೆ. ದೇವತೆಗಳ ಶಕ್ತಿಯೆಲ್ಲ ತಾರಕಾಸುರನ ಮುಂದೆ ಉಡುಗಿಹೋಗಿ ಅವರು ನಿಸ್ಸಹಾಯರಾಗಿದ್ದಾರೆ. ವಿಷ್ಣು ಚಕ್ರವನ್ನು ಬಿಟ್ಟರೆ ಅದು ರಕ್ಕಸನ ಕೊರಳ ಹಾರವಾಯಿತಂತೆ. ಶಿವಪಾರ್ವತಿಯರಿಗೆ ವಿವಾಹವಾದರೆ ಅವರ ಮಗನಿಂದ ತಾರಕವಧೆಯಾಗುವುದೆಂದು ಬ್ರಹ್ಮ ದೇವತೆಗಳನ್ನು ಸಂತೈಸಿ ಕಳುಹುತ್ತಾನೆ.

 ಈ ಕಾರ್ಯಕ್ಕೆ ಮನ್ಮಥನೇ ಯೋಗ್ಯನೆಂದು ಇಂದ್ರ ಅವನಿಗೆ ಮರ್ಯಾದೆ ಮಾಡಿ ಶಿವನ ಮನಸ್ಸನ್ನು ಪಾರ್ವತಿ ಅಪಹರಿಸುವಂತೆ ಮಾಡಬೇಕೆಂದು ನೇಮಿಸುತ್ತಾನೆ. ಮನ್ಮಥನ ಮಿತ್ರನಾದ ವಸಂತನ ಆಗಮನದಿಂದ ಆಶ್ರಮದ ಗಿಡಮರಬಳ್ಳಿಗಳಲ್ಲಿ ಪಶುಪಕ್ಷಿಗಳಲ್ಲಿ ಕೂಡ ಕಾಮವಿಕಾರಗಳು ಅಂಕುರಿಸುವುವು. ಮೂರನೆಯ ಸರ್ಗದ ಈ ಪ್ರಕೃತಿವರ್ಣನೆ ಪಾರ್ವತಿಯ ದಿವ್ಯಸೌಂದರ್ಯದ ವರ್ಣನೆಗೆ ಹಿನ್ನೆಲೆಯಾಗಿ ಬಂದಿದ್ದು ಸಂಸ್ಕøತ ಸಾಹಿತ್ಯದಲ್ಲಿಯೇ ಅತ್ಯಂತ ರಸಮಯವಾಗಿದೆ. ಸಮಯ ಸಾಧಿಸಿ ಕಾಮ ತನ್ನ ಸಮ್ಮೋಹನಾಸ್ತ್ರವನ್ನು ಶಿವನ ಮೇಲೆ ಪ್ರಯೋಗಿಸುತ್ತಾನೆ. ಒಂದು ಕ್ಷಣ ಅವನ ಮನಸ್ಸೂ ಚಂಚಲವಾಗುತ್ತದೆ. ಮರುಕ್ಷಣವೇ ಅವನ ನೇತ್ರಾಗ್ನಿ ಕಾಮನನ್ನು ಸುಟ್ಟು ಬೂದಿ ಮಾಡುತ್ತದೆ.

 ನಾಲ್ಕನೆಯ ಸರ್ಗದ ತುಂಬ ರತಿಯ ಪ್ರಲಾಪ ವರ್ಣಿತವಾಗಿದೆ. ಕರುಣರಸ ಇಲ್ಲಿ ಹೊನಲಾಗಿ ಹರಿದಿದೆ. ಶೃಂಗಾರದಂತೆ ಕರುಣ ರಸಪ್ರತಿಪಾದನೆಯಲ್ಲೂ ಕಾಳಿದಾಸನಿಗಿರುವ ನೈಪುಣ್ಯವನ್ನಿಲ್ಲಿ ಕಾಣಬಹುದು.

 ಶಿವನನ್ನು ತನ್ನ ಚೆಲುವಿನಿಂದ ಒಲಿಸಲಾಗದ ಪಾರ್ವತಿ ಉಗ್ರತಪವನ್ನು ಕೈಗೊಳ್ಳುತ್ತಾಳೆ. ಅದರ ವಿಸ್ತಾರವಾದ ವರ್ಣನೆ ಐದನೆಯ ಸರ್ಗದಲ್ಲಿ ಬರುತ್ತದೆ. ಮಹಾ ಮಹಾ ಋಷಿಗಳ ತಪಸ್ಸನ್ನೂ ಅವಳ ದೃಢ ವ್ರತ ಮೀರಿಸಿದೆ. ಕಡೆಗೆ ಶಿವನೇ ಅವಳ ಮನುಶ್ಯುದ್ಧಿಯನ್ನು ಪರೀಕ್ಷಿಸಲೆಂದು ವಟುವೇಷದಲ್ಲಿ ಬರುತ್ತಾನೆ. ಶಿವನ ಅಕಟವಿಕಟ ಸ್ವರೂಪವನ್ನೂ ಮನಬಂದಂತೆ ತೆಗಳುತ್ತಾನೆ. ಎಷ್ಟಾದರೂ ಪಾರ್ವತಿಯ ಮನೋನಿರ್ಧಾರ ಅಚಲವೇ ಎಂಬುದನ್ನು ಮನಗಂಡು ತನ್ನ ನಿಜರೂಪವನ್ನು ತೋರಿಸಿ ಅವಳನ್ನು ವರಿಸಲು ಹೊರಡುತ್ತಾನೆ. ಪಾರ್ವತಿಯ ಮನದಾಸೆ ಕೈಗೂಡುತ್ತದೆ.

 ಲೋಕರೀತಿಯಂತೆ ಗುರುಹಿರಿಯರ ಆಶೀರ್ವಾದ ಪಡೆದು ಶಿವಪಾರ್ವತಿಯರು ವಿವಾಹವಾಗುವ ವರ್ಣನೆ ಆರು ಮತ್ತು ಏಳನೆಯ ಸರ್ಗಗಳ ವಿಷಯ. ಗೃಹಸ್ಥ ಜೀವನದ ಆದರ್ಶ ಮೌಲ್ಯಗಳನ್ನೆಲ್ಲ ಇಲ್ಲಿ ಕಾಳಿದಾಸ ಸುಂದರವಾಗಿ ಕಾವ್ಯರೂಪದಿಂದ ಚಿತ್ರಿಸಿದ್ದಾನೆ. ಈ ಭಾಗ ಕೂಡ ಅವನ ಪ್ರತಿಭೆಯ ನಿರ್ಮಾಣಕ್ಷಮತ್ವಕ್ಕೆ ಸೂಚಕವಾಗಿದೆ. ನಾಚುವ ನವವಧು, ಆಶೀರ್ವದಿಸುವ ಮುತ್ತೈದೆಯರು, ಎಲ್ಲರೂ ಮೆಚ್ಚುವ ವಿವಾಹ ವಿಧಿಕಲಾಪಗಳು-ಇವು ಇಂದೂ ನಮ್ಮ ಮನಸ್ಸನ್ನು ಸೆಳೆಯಬಲ್ಲವು.

 ಶಯ್ಯಾಗೃಹದಲ್ಲಿ ನವಪ್ರಣಯಿಗಳ ಸುರತವಿಲಾಸದ ವರ್ಣನೆಗೆ ಇಡಿಯ ಎಂಟನೆ ಸರ್ಗ ಮೀಸಲಾಗಿದೆ. ದೇವತೆಗಳ ಶೃಂಗಾರವನ್ನೂ ಲೌಕಿಕ ಕಾಮಶಾಸ್ತ್ರಾನುಸಾರ ಇಲ್ಲಿ ವರ್ಣಿಸಲಾಗಿದ್ದು ಉಜ್ಜ್ವಲ ಅಲಂಕಾರಗಳ ಪ್ರಭೆಯಿಂದ ಅವನ್ನು ಬೆಳಗಿಸಲಾಗಿದೆ. ಹಿಂದಿನ ಲಾಕ್ಷಣಿಕರಲ್ಲಿ ಕೆಲವರು ಇದನ್ನು ಅಸಭ್ಯ ದೋಷವೆಂದು ಕುಂದಿಟ್ಟರೂ ಕಾಳಿದಾಸನ ಪ್ರತಿಭಾತಿಶಯದಿಂದ ದೋಷ ಮರೆಯಾಗಿದೆಯೆನ್ನಲು ಮರೆತಿಲ್ಲ.

 ಶೃಂಗಾರರಸ ನಿರೂಪಣೆಯಲ್ಲಿ ಕಾಳಿದಾಸ ಎತ್ತಿದ ಕೈಯೆಂದು ಖ್ಯಾತಿಯಾಂತಿದ್ದಾನೆ. ಅವನ ಈ ವಿಖ್ಯಾತಿಗೆ ಕುಮಾರಸಂಭವ ಕೂಡ ಆಧಾರವಾಗಿದೆ. ದಿವ್ಯ ಸೌಂದರ್ಯದ ನಖಶಿಖಾಂತ ವರ್ಣನೆ, ಶೃಂಗಾರದ ವಿಪ್ರಲಂಭ ಹಾಗು ಸಂಭೋಗ ಮುಖಗಳ ಹೃದಯಸ್ಪರ್ಶಿಯಾದ ನಿರೂಪಣೆ, ತಪಸ್ಸೌಂದರ್ಯದ ಹಾಗು ಪರಮಾತ್ಮನ ಯೋಗಾನುಷ್ಠಾನದ ಮಾರ್ಮಿಕ ಪ್ರತಿಪಾದನೆ; ಹಾಗು ಎಲ್ಲಕ್ಕೂ ಮೇಲೆ ತಪಸ್ಸೌಂದರ್ಯದ, ಕಾಮದಹನದ ಸಾಂಕೇತಿಕಾರ್ಥಧ್ವನಿ, ಭಾರತೀಯ ಸಂಸ್ಕøತಿಯ ತಿರುಳಾದ ಪುರುಷಾರ್ಥಗಳ ಉಜ್ಜ್ವಲ ಸಮನ್ವಯ ದೃಷ್ಟಿ, ಸಂವಾದಗಳಲ್ಲಿ ತಿಳಿಹಾಸ್ಯ ತಪ್ಪದ ನಾಟಕೀಯತೆ, 
ಪ್ರಕೃತಿಯ ವಿವಿಧ ಮುಖಗಳ ಭವ್ಯಶಬ್ದ ಚಿತ್ರ ರಚನೆ, ಉತ್ತಮ ಜೀವನದ ಮೀಮಂಸೆ, ಉಪಮೋತ್ಪ್ರೇಕ್ಷಾದಿಗಳ ಸಮುಚಿತ ಚಮತ್ಕಾರ-ಇವೆಲ್ಲವುಗಳಿಂದ ಭರಿತವಾಗಿರುವ ಕುಮಾರಸಂಭವ ಇಂದಿಗೂ ಓದುಗರನ್ನು ಆಕರ್ಷಿಸುತ್ತಿದೆಯೆಂದರೆ ಅತಿಶಯೋಕ್ತಿಯಾಗಲಾರದು.     (ಕೆ.ಕೆ.)

 ರಘುವಂಶ : 19 ಸರ್ಗಗಳ ಮಹಾಕಾವ್ಯ. ಕಾಳಿದಾಸನ ಪಳಗಿದ ಕೈ ಇದರಲ್ಲಿ ಸ್ಪಷ್ಟವಾಗಿದೆ. ಸೂರ್ಯವಂಶದ ರಾಜರ ಚರಿತ್ರೆಯನ್ನಿಲ್ಲಿ ದಿಲೀಪನಿಂದ ಮೊದಲುಗೊಂಡು ಬರೆಯಲಾಗಿದೆ. ಇದರಲ್ಲಿ ಮೂರು ಘಟ್ಟಗಳನ್ನು ಕಾಣಬಹುದು. ಮೊದಲ ಒಂಬತ್ತು ಸರ್ಗಗಳು ಶ್ರೀರಾಮನ ಪೂರ್ವ ಚರಿತ್ರೆ. 10 ರಿಂದ 15 ಪೂರ್ತಿ ಶ್ರೀರಾಮನ ಕಥೆ. ಮಿಕ್ಕವು ಶ್ರೀರಾಮನ ಅನಂತರದ ಅರಸುಗಳ ಚರಿತ್ರೆ. ದಿಲೀಪನಿಗೆ ಮಕ್ಕಳಿಲ್ಲದಿರಲು ತನ್ನ ಕುಲಗುರುವಾದ ವಸಿಷ್ಠನ ಬಳಿಗೆ ಹೋಗಿ ಅವರ ಉಪದೇಶಾನುಸಾರ ಪತ್ನೀಸಮೇತನಾಗಿ ಸುರಭಿಯ ಮಗಳಾದ ನಂದಿನೀಧೇನುವಿನ ಸೇವೆಯನ್ನು ಮಾಡುತ್ತಿದ್ದ. ಒಂದು ದಿನ ಮಾಯಾಸಿಂಹವೊಂದು ನಂದಿನಿಯನ್ನು ಹಿಡಿದುಕೊಳ್ಳಲು, ಆ ಹಸುವನ್ನು ಸಿಂಹದಿಂದ ಬಿಡಿಸಲು ಬಾಣವನ್ನೆಳೆಯಲು ಹೋದ ರಾಜನ ಕೈ ಬತ್ತಳಿಕೆಗೇ ಅಂಟಿತು. ಆ ಸಿಂಹ ಮನುಷ್ಯರಂತೆ ಮಾತನಾಡಿತು. ಅದರೊಡನೆ ರಾಜ ಬಹಳಕಾಲ ವಾದ ಮಾಡಿದ. ಸಿಂಹ ಯಾವುದಕ್ಕೂ ಒಪ್ಪಲಿಲ್ಲ. ಕಡೆಗೆ ಆ ಹಸುವಿನ ಬದಲು ತನ್ನನ್ನೇ ತಿನ್ನಬೇಕೆಂದು ಆತ್ಮಾರ್ಪಣ ಮಾಡಿದ. ಆಗ ನಂದಿನೀ ಇವನ ಭಕ್ತಿಗೆ ಮೆಚ್ಚಿದಳು. ಸಿಂಹ ಮಾಯವಾಯಿತು. ದಿಲೀಪ ಪುತ್ರ ವರವನ್ನು ಪಡೆದ. ಅನಂತರ ಸುದಕ್ಷಿಣೆಯಲ್ಲಿ ರಘು ಹುಟ್ಟಿದ. ದಿಲೀಪನ ಅನಂತರ ರಾಜನಾದ ರಘು ದಿಗ್ವಿಜಯಕ್ಕಾಗಿ ಹೊರಟ. ಅವನಿಗೆ ಯಾರೂ ಎದುರಾಳಿಗಳೇ ಇರಲಿಲ್ಲ. ಹೀಗೆ ಸರ್ವತ್ರ ಜಯಶಾಲಿಯಾಗಿ ಹಿಂತಿರುಗಿದ ಮೇಲೆ ವಿಶ್ವಜಿತ್ ಯಾಗವನ್ನು ಮಾಡಿ ತನ್ನಲ್ಲಿದ್ದ ಸರ್ವಸ್ವವನ್ನೂ ದಾನ ಮಾಡಿದ. ಈ ಸ್ಥಿತಿಯಲ್ಲಿದ್ದ ರಘುವಿನ ಬಳಿಗೆ ಕೌತ್ಸನೆಂಬ ಋಷಿ ಬಂದು, ಗುರುದಕ್ಷಿಣೆಗಾಗಿ 14 ಲಕ್ಷ ವರಹಗಳು ತನಗೆ ಬೇಕೆಂದು ಕೇಳಿದ. ಕೇಳಿದವರಿಗಿಲ್ಲವೆನ್ನದ ಸ್ವಭಾವವುಳ್ಳ ರಘು ಒಪ್ಪಿಕೊಂಡ. ಆ ಧನವನ್ನು ಸಂಗ್ರಹಿಸಲು ಕುಬೇರನೊಡನೆ ಯುದ್ಧ ಹೂಡಬೇಕೆಂದು ಅಂದುಕೊಂಡ. ಕುಬೇರ ಇವನ ಪರಾಕ್ರಮಕ್ಕೆ ಹೆದರಿ ಆ ರಾತ್ರಿ ರಘುವಿನ ಕೋಶದಲ್ಲಿ ಸುವರ್ಣವೃಷ್ಟಿಯನ್ನು ಕರೆದ. ರಘು ಕೌತ್ಸನಿಗೆ ಆತ ಕೇಳಿದುದಕ್ಕಿಂತಲೂ ಹೆಚ್ಚಾಗಿಯೇ ಧನವನ್ನು ಕೊಟ್ಟು ಸಂತೋಷಗೊಳಿಸಿದ. ಪ್ರತಿಯಾಗಿ ಕೌತ್ಸ ವೀರಪುತ್ರ ಹುಟ್ಟಲೆಂದು ಆಶೀರ್ವದಿಸಿದ. ಆ ಆಶೀರ್ವಾದ ಫಲದಿಂದ ಜನಿಸಿದವನೇ ಅಜ. ವಿದರ್ಭರಾಜನಾದ ಭೋಜನ ತಂಗಿ ಇಂದುಮತಿ ಸ್ವಯಂವರದಲ್ಲಿ ಅಜನನ್ನು ವರಿಸಿದಳು. ಇವರ ಮಗನೇ ದಶರಥ. ಇಂದುಮತಿ ಅಜರು ಒಮ್ಮೆ ಉದ್ಯಾನವನದಲ್ಲಿ ವಿಹರಿಸುತ್ತಿದ್ದಾಗ ದಿವ್ಯ ಪುಷ್ಪಮಾಲೆಯೊಂದು ಇಂದುಮತಿಯ ಮೇಲೆ ಬಿತ್ತು. ಆ ಕ್ಷಣವೇ ಅವಳು ಮೃತಳಾದಳು. ಅಜ ಆಕೆಯ ವಿರಹವನನು ತಾಳಲಾರದೆ ಕುಗ್ಗಿ, ಕಂದಿ, ಹಲವು ವರ್ಷಗಳಲ್ಲಿಯೇ ಸ್ವರ್ಗಸ್ಥನಾದ. ಆ ಬಳಿಕ ರಾಜನಾದ ದಶರಥ ಒಂದು ದಿನ ಬೇಟೆಗೆಂದು ಹೋಗಿದ್ದಾಗ ತಿಳಿಯದೆ ಮುನಿ ಕುಮಾರನನ್ನು ಹೊಡೆದು ಕೊಂದು, ಪುತ್ರಶೋಕದಿಂದ ಸಾಯುವ ಶಾಪವನ್ನು ಪಡೆದ. ಪುತ್ರಕಾಮೇಷ್ಟಿಯಾಗವನ್ನು ಮಾಡಿ ರಾಮ, ಲಕ್ಷ್ಮಣ, ಶತ್ರುಘ್ನ ಮತ್ತು ಭರತರನ್ನು ಪಡೆದ. 11ನೆಯ ಸರ್ಗದಿಂದ 5 ಸರ್ಗಗಳು ಪೂರ್ತಿ ಉತ್ತರ ಕಾಂಡ ಸೇರಿದ ವಾಲ್ಮೀಕಿ ರಾಮಾಯಣದ ಸಂಗ್ರಹ ಬರುತ್ತದೆ. ಅಲ್ಲಿ ಇಲ್ಲಿ ಕೆಲವು ವ್ಯತ್ಯಾಸಗಳನ್ನು ಬಿಟ್ಟರೆ ಕಥೆಯಲ್ಲಿ ವಾಲ್ಮೀಕಿಯನ್ನೇ ಕವಿ ಅನುಸರಿಸಿದ್ದಾನೆ. ರಾಮನ ಅನಂತರ ಕುಶ ಆಮೇಲೆ ಅತಿಥಿ ಅವನಾದ ಮೇಲೆ ನಿಷಧನೇ ಮೊದಲಾದ ರಾಜರು ಆಳಿದರು. ಕಡೆಯವನಾದ ಅಗ್ನಿವರ್ಣ ಸ್ತ್ರೀಲೋಲನಾಗಿದ್ದು ರಾಜ್ಯ ಕಾರ್ಯಗಳನ್ನು ಪೂರ್ಣವಾಗಿ ಮರೆತ. ಕೊನೆಗೆ ಕ್ಷಯರೋಗಕ್ಕೆ ತುತ್ತಾಗಿ ಮಡಿದ. ಗರ್ಭಿಣಿಯಾಗಿದ್ದ ಅವನ ಹೆಂಡತಿಯೇ ಅವನ ಅನಂತರ ರಾಜ್ಯಭಾರವನ್ನು ವಹಿಸಿಕೊಂಡಳು. ಇಲ್ಲಿಗೆ ರಘುವಂಶ ಕಾವ್ಯ ಹಠಾತ್ತನೆ ನಿಲ್ಲುತ್ತದೆ. ಈ ಕಾವ್ಯದ ವಸ್ತುವನ್ನು ವಿಷ್ಣುಪುರಾಣ, ಪದ್ಮಪುರಾಣ ಹಾಗೂ ವಾಲ್ಮೀಕಿ ರಾಮಾಯಣಗಳಿಂದ ಆರಿಸಿಕೊಳ್ಳಲಾಗಿದೆ. ಆದರೂ ದಶರಥನ ಮತ್ತು ಶ್ರೀರಾಮನ ಕಥೆಯನ್ನು ಬಿಟ್ಟರೆ ಮಿಕ್ಕವೆಲ್ಲವೂ ಬಹುಪಾಲು ಕಾಳಿದಾಸನ ಕಲ್ಪನೆಯೆಂದೇ ತೋರುತ್ತದೆ. ರಘುವಿನ ದಿಗ್ವಿಜಯ ಸಂದರ್ಭದಲ್ಲಿ ಭಾರತದಲ್ಲಿ ವಿವಿಧ ಪ್ರದೇಶಗಳನ್ನು ಬಣ್ಣಿಸುವ ಅವಕಾಶವನ್ನು ಕವಿ ಕಲ್ಪಿಸಿಕೊಂಡಿದ್ದಾನೆ. ಇಂದುಮತೀ ಸ್ವಯಂವರದಲ್ಲಿ ಸಭಾಂಗಣದಲ್ಲಿ ನೆರದಿದ್ದ ಅನೇಕ ರಾಜರ, ರಾಜಪುತ್ರರ ವರ್ಣನೆ ಮನಮೋಹಕವಾಗಿದೆ. ಅಜವಿಲಾಪ ರತಿವಿಲಾಪದಷ್ಟು ಹೃದಯವನ್ನು ಮುಟ್ಟುವುದಿಲ್ಲ. ಅರಣ್ಯದಲ್ಲಿ ಪರಿತ್ಯಕ್ತಳಾದ ಸೀತೆಯ ಸ್ಥಿತಿ ಕರುಣೆಯ ಚರಮ ಸೀಮೆಯನ್ನು ಮುಟ್ಟಿದೆ. ಕಾಳಿದಾಸ ಮುಖ್ಯವಾಗಿ ಆರಿಸಿಕೊಂಡಿರುವುದೆಲ್ಲವೂ ಆದರ್ಶ ರಾಜರ ಕತೆಗಳನ್ನೆ. ಅವರ ಆದರ್ಶ ಗುಣಗಳನ್ನು ಬಹು ವಿವರವಾಗಿ ಆತ ವರ್ಣಿಸಿದ್ದಾನೆ. ದಿಲೀಪ ಆದರ್ಶ ರಾಜ, ಗುರುಭಕ್ತ, ಶಾಸ್ತ್ರವಿಧಿಗಳನ್ನು ಆಚರಿಸುವುದರಲ್ಲಿ ಬಹಳ ಆಸಕ್ತಿಯುಳ್ಳವ. ಗುರುವಿನ ಆಜ್ಞೆಗೆ ಅಡ್ಡಿ ಬರುವುದಾದರೆ, ತನ್ನ ಜೀವನವನ್ನೇ ಅರ್ಪಿಸುವಷ್ಟು ದಾಢ್ರ್ಯವುಳ್ಳವ. ರಘು ಅಪ್ರತಿಮ ವೀರ, 'ಅರ್ಥಿಕಾಮಾತ್ ಅಧಿಕಪ್ರದ'-ಬೇಡಿದವರ ಬಯಕೆಗಿಂತ ಹೆಚ್ಚಾಗಿಯೇ ಕೊಡುವವನೆಂದು ಬಿರುದು ಹೊತ್ತ ಮಹಾಪುರುಷ. ಸತಿ ಇಲ್ಲದಿದ್ದರೆ ಪತಿ ನಿರ್ಜೀವವೇ ಎಂಬುದನ್ನು ಆದರ್ಶಪ್ರೇಮಿ ಅಜನ ದೃಷ್ಟಾಂತದಿಂದ ಕವಿ ಸಾರಿದ್ದಾನೆ. ಪುತ್ರಪ್ರೇಮದ ಬೆಲೆಯನ್ನು ದಶರಥನ ಚರಿತ್ರೆ ಸ್ಪಷ್ಟಪಡಿಸುತ್ತದೆ. ಶ್ರೀರಾಮ ಅನಂತ ಗುಣನಿಧಿ. ತನ್ನ ಧರ್ಮ ಪ್ರಜಾಪಾಲನ, ಅದಕ್ಕೆ ಬಾಧೆ ಬರದಂತೆ ಏನು ಬೇಕಾದರೂ ಮಾಡಲು ಸಿದ್ಧನೆಂದು ಆತ ತಿಳಿದಿದ್ದ: ಅದಕ್ಕಾಗಿ ಪತ್ನಿಯನ್ನೂ ತ್ಯಜಿಸಿದ. ಅವನ ಪಿತೃಭಕ್ತಿ, ಭಾತೃವಾತ್ಸಲ್ಯಗಳಿಗೆ ಸಾದೃಶ್ಯವೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಶ್ರೀರಾಮ ಏಕಪತ್ನೀ ವ್ರತಸ್ಥ. ಹೀಗೆ ಆದರ್ಶ ವ್ಯಕ್ತಿತ್ವವನ್ನು ಮುಂದಿಡುವ ಈ ಕಾವ್ಯ ಆದರ್ಶ ಕಾವ್ಯಾವಾಗಿದೆ.

 ಇನ್ನೂ ಕಾಳಿದಾಸನ ನಾಟಕಗಳ ವಿಚಾರ. ಕಾಳಿದಾಸ ತನ್ನ ಮೂರು ನಾಟಕಗಳಲ್ಲಿಯೂ ಪ್ರೇಮದ ವಿವಿಧ ಮುಖವನ್ನು ಚಿತ್ರಿಸುತ್ತಾನೆ. ಆತನ ಮಾಲವಿಕಾಗ್ನಿಮಿತ್ರದಲ್ಲಿ ಪ್ರತಿಪಾದಿತವಾಗಿರುವ ಪ್ರೇಮ ಕೇವಲ ಐಹಿಕ. ವಿಕ್ರಮೋರ್ವಶೀಯದಲ್ಲಿ ಪ್ರೇಮದ ಮಟ್ಟ ಕೊಂಚ ಮೇಲೇರುತ್ತದೆ. ಶಾಕುಂತಲದಲ್ಲಿ ಪ್ರೇಮ ಸ್ವರ್ಗದ ಮಟ್ಟಕ್ಕೇರುತ್ತದೆ. ಇಂಥ ಪ್ರತಿಪಾದನೆಗೆ ತಕ್ಕ ಸನ್ನಿವೇಶ ಪಾತ್ರಗಳ ಸೃಷ್ಟಿ ಅಭೂತಪೂರ್ವ ಹಾಗೂ ಅಸದೃಶ ರೀತಿಯಲ್ಲಿ ಕಾಲಿದಾಸತ್ರಯ ಎಂದು ಪ್ರಸಿದ್ಧವಾದ ಈ ನಾಟಕಗಳಲ್ಲಿ ಮೂಡಿಬಂದಿವೆ.

 ಮಾಲವಿಕಾಗ್ನಿಮಿತ್ರ: ಐದು ಅಂಕಗಳ ನಾಟಕ, ಅಂತಃಪುರದಲ್ಲಿಯೇ ನಡೆದ ಪ್ರಣಯ ವೃತ್ತಾಂತ ಇದರ ವಸ್ತು. ಅಗ್ನಿಮಿತ್ರನೆಂಬ ದೊರೆ ತನ್ನ ಅಂತಃಪುರದಲ್ಲಿ ವೇಷಾಂತರದಲ್ಲಿದ್ದ ಮಾಲವಿಕೆ ಎಂಬ ರಾಜಪುತ್ರಿಯನ್ನು ಕಂಡು ಮೋಹಿಸಿ, ಅವಳನ್ನು ವಿವಾಹವಾದುದು ನಾಟಕದ ಕಥೆ. ಕಥೆ ಕುತೂಹಲದಿಂದ ಪ್ರಾರಂಭವಾಗಿ ಮಧ್ಯೆ ಮಧ್ಯೆ ಅಡ್ಡಿಗಳನ್ನು ಹೊಂದಿ. ಕೊನೆಗೆ ಅವೆಲ್ಲವೂ ಆಶ್ಚರ್ಯಕರವಾದ ರೀತಿಯಲ್ಲಿ ದೂರವಾಗಿ ಸುಖಾಂತವಾಗಿ ಪರಿಣಮಿಸಿದೆ. ಕವಿ ಕಥೆಯನ್ನು ಹೊಂದಿಸಿಕೊಳ್ಳುವುದರಲ್ಲಿ ಕೌಶಲವನ್ನು ತೋರಿಸಿರುವಂತೆಯೇ ಮಾತುಗಳನ್ನು ಸಂದರ್ಭಕ್ಕೆ ತಕ್ಕಂತೆ ಸೊಗಸಾಗಿ ಜೋಡಿಸುವುದರಲ್ಲಿಯೂ ತನ್ನ ಜಾಣ್ಮೆಯನ್ನು ಮೆರೆದಿದ್ದಾನೆ. ಆದರ್ಶ ಯುವತಿಯಾದ ಮಾಲವಿಕೆಯ ರೂಪ ಸೌಂದರ್ಯಾದಿಗಳನ್ನೂ ನಟನ ಚಾತುರ್ಯವನ್ನೂ ಪ್ರದರ್ಶಿಸುವಲ್ಲಿ ಕವಿ ಅಮಿತಾಸಕ್ತಿಯನ್ನು ಕೋರಿದ್ದಾನೆ. ತನ್ಮೂಲಕ ಪ್ರೇಕ್ಷಕವರ್ಗದವರ ಆಸಕ್ತಿಯನ್ನು ಸೆರೆಹಿಡಿದಿದ್ದಾನೆ. ಮಾಲವಿಕೆ ಅಗ್ನಿಮಿತ್ರರ ಸಮಾಗಮಕ್ಕೆ ಆಸಕ್ತಿಯನ್ನು ಆಗುವ ಅನುಕೂಲಗಳು ಅವನ ಪಾತ್ರಕ್ಕೆ ಕಳೆಕೊಟ್ಟಿವೆ.

 ವಿಕ್ರಮೋರ್ವಶೀಯ: ಐದು ಅಂಕಗಳ ನಾಟಕ. ಕೇಶಿ ಎಂಬ ದಾನವನಿಂದ ಕಷ್ಟಕ್ಕೊಳಗಾದ ಅಪ್ಸರೆ ಊರ್ವಶಿಯನ್ನು ಪೂರೂರವ ಬಿಡಿಸಿದ್ದರಿಂದ ಅ ರಾಜನಲ್ಲಿ ಅವಳಿಗೆ ಅನುರಾಗ ಹುಟ್ಟಿತು. ಅವರೀರ್ವರ ಪ್ರಣಯ ಕಥೆಯೇ ನಾಟಕದ ವಸ್ತು. ಮಧ್ಯೆ ಊರ್ವಶಿ ಪ್ರಣಯ ಕೋಪದಿಂದ ಕುಮಾರ ವನವನ್ನು ಪ್ರವೇಶಿಸಿ ಹುಚ್ಚು ಹಿಡಿದು ಅಲೆಯುವ ಪ್ರಸಂಗವನ್ನು ಕವಿ ಹೃದಯಸ್ಪರ್ಶಿಯಾಗಿ ವಿವರಿಸುತ್ತಾನೆ. ವೇದಗಳಲ್ಲಿ ಸೂಚಿತವಾದ ಪುರೂರವ ಊರ್ವಶಿಯರ ಕಥೆ ಪದ್ಮಪುರಾಣ, ವಿಷ್ಣುಪುರಾಣ ಮತ್ತು ಭಾಗವತಗಳಲ್ಲಿ ವಿವರಿಸಲ್ಪಟ್ಟಿದೆ. ಕಥಾ ಸರಿತ್ಸಾಗರದಲ್ಲಿಯೂ ಬರುವುದರಿಂದ ಬೃಹತ್ಕಥೆಯಲ್ಲೂ ಇದು ಇದ್ದಿತೆನ್ನಬಹುದು. ಇವುಗಳ ಆಧಾರದ ಮೇಲೆ ಕಥೆಯನ್ನು ತನ್ನ ಉದ್ದೇಶಕ್ಕೆ ತಕ್ಕಂತೆ ಕಾಳಿದಾಸ ರೂಪಿಸಿಕೊಂಡಿದ್ದಾನೆ. ಮೇಲಿನ ಎರಡೂ ನಾಟಕಗಳ ಮಹಾರಾಣಿಯರು ಪತಿವ್ರತಾಶಿರೋಮಣಿಗಳು; ಪತಿಯ ಸಂತೋಷಕ್ಕಾಗಿ ತಮ್ಮ ಸುಖವನ್ನೆ ತ್ಯಜಿಸಲು ಸಿದ್ಧರಾದವರು. ಮಾಲವಿಕಾಗ್ನಿಮಿತ್ರದ ಧಾರಣಿ ಉದಾತ್ತಭಾವನೆಯಿಂದ ಪತಿಯ ಹಿತವನ್ನು ಬಯಸಿ ಪ್ರತಿಪಕ್ಷ ವರ್ಗಕ್ಕೆ ಸೇರಿದ ಮಾಲವಿಕೆಯನ್ನು ವಿವಾಹವಾಗಲು ರಾಜನಿಗೆ ತಾನೇ ಅನುಮತಿ ಕೊಡುತ್ತಾಳೆ. ವಿಕ್ರಮೋರ್ವಶೀಯದ ಔಶೀನರಿ ಊರ್ವಶಿಯ ಪ್ರಣಯ ವಿಷಯವನ್ನು ತಿಳಿದು ಮೊದಲು ಕೋಪಿಸಿಕೊಂಡರೂ ಕಡೆಗೆ ತಾನಾಗಿಯೇ ತನ್ನ ಸುಖವನ್ನು ಒತ್ತಿಟ್ಟು, ಪತಿಯ ಸುಖವನ್ನು ಬಯಸುತ್ತಾಳೆ.

(ಎಸ್.ಆರ್.ಎ.)

 ಅಭಿಜ್ಞಾನ ಶಾಕುಂತಲ: ಮಹಾಭಾರತದ ಶಾಕುಂತಲೋಪಾಖ್ಯಾನದ ಅಸ್ಥಿಪಂಜರದಲ್ಲಿ ನಾಟಕೀಯ ವಸ್ತುವಿಗೆ ಬೇಕಾದ ಮೂಲದ್ರವ್ಯಗಳು ಮಾತ್ರ ಕಾಳಿದಾಸನ ಪ್ರತಿಭೆಗೆ ದೊರೆತವೆನ್ನಬಹುದು. ಅತಿಯಾಸೆಯ ಕನ್ಯೆ, ಕಾಮಾತುರನಾದ ರಾಜ ಇವರಿಬ್ಬರೂ ಅನುಚಿತ ಅತುರದಲ್ಲಿ ಕೂಡಿ ಕಾಲಾಂತರದವರೆಗೆ ಹೇಗೆ ಪರಿತಪಿಸಿದರೆಂಬುದೇ ಮೂಲಕಥೆಯಾಗಿತ್ತು. ತನ್ನ ಚೆಲುವಿನ ಗರ್ವವುಳ್ಳ ಕನ್ಯೆ ಅದನ್ನು ಮಾರಿಕೊಳ್ಳಲು ಒಂದು ರಾಜ್ಯವನ್ನೇ ಬೆಲೆಯಾಗಿ ನಿಶ್ಚಯಿಸುತ್ತಾಳೆ. ಇಲ್ಲಿ ಅನುರಾಗದ ಆವೇಗಕ್ಕಿಂತ ಮಾರಾಟದ ವ್ಯವಹಾರವೇ ಹೆಚ್ಚಾದಂತಿದೆ. ಹಿರಿಯರ ಅನುಮತಿಯನ್ನು ಪಡೆಯಬೇಕೆಂದು ಅವರಲ್ಲಿ ಒಬ್ಬರಿಗೂ ಹೊಳೆಯುವುದಿಲ್ಲ. ರಾಜನಾದ ದುಷ್ಯಂತ ಕೂಡ ರಾಜಧಾನಿಯನ್ನು ತಲುಪಿದೊಡನೆ ಶಕುಂತಲೆಯನ್ನು ಕರೆಸಿಕೊಳ್ಳುವುದಾಗಿ ಮಾಡಿದ್ದ ವಾಗ್ದಾನವನ್ನು ಸರಾಗವಾಗಿ ಮರೆತೇ ಬಿಡುತ್ತಾನೆ. ಅವನಿಗೆ ಮತ್ತೆ ನೆನಪು ಮಾಡಿಕೊಡಲು ಅವಳೇ ಆರು ವರ್ಷಗಳ ಕಾಲ ಸುಮ್ಮನಿದ್ದಳೆನ್ನುವುದಾದರೋ ಒಂದು ಸೋಜಿಗವೇ. ಆಗಲೂ ಶಕುಂತಲೆಯ ಅಥವಾ ಅವಳ ಬಾಲಕನ ಅರಿವೇ ತನಗಿಲ್ಲವೆಂದು ರಾಜ ಹಾರಿಕೆಯ ಮಾತನ್ನೇ ಆಡುತ್ತಾನೆ. ಅವರನ್ನು ಸ್ವೀಕರಿಸಿದರೆ ಪ್ರಜೆಗಳೆಲ್ಲ ತನ್ನ ನಡತೆಯನ್ನು ಶಂಕಿಸುವರೋ ಎಂಬ ಅಂಜಿಕೆಯೇ ಅವನಿಗೆ ಪ್ರಬಲವಾಗುತ್ತದೆ. ಹೇಗೋ ಕಡೆಗೊಮ್ಮೆ ಈ ವಿಷಯ ಪರಿಸ್ಥಿತಿಯಿಂದ ಇಬ್ಬರೂ ಪಾರಾಗುವಂತೆ ಅನಿರೀಕ್ಷಿತವಾಗಿ ಅಶರೀರ ವಾಣಿಯ ದೈವ ಸಹಾಯವೊದಗುತ್ತದೆ.

 ಪರಿಶುದ್ಧ ಹಾಗು ಉದಾತ್ತವಾದ ಪ್ರೇಮದ ಚಿತ್ರಣವೇ ಕಾಳಿದಾಸನ ವಿವಕ್ಷೆ. ಆದುದರಿಂದ ಆತ ಉಪಾಖ್ಯಾನದ ಶಕುಂತಲೆಯ ವ್ಯಕ್ತಿತ್ವದಲ್ಲಿ ಅನಪೇಕ್ಷಿತ ಅಥವಾ ಅಸಂಭಾವ್ಯವೆನಿಸಿದ ಅಂಶಗಳನ್ನೆಲ್ಲ ಕೈಬಿಟ್ಟು. ಮುಗ್ಧ, ನಿರಾಡಂಬರ, ಕೋಮಲ, ಮಧುರ, ಮನೋಹರ, ಸುಶೀಲಗಳ ಸಕಾರಮೂರ್ತಿಯನ್ನಾಗಿ ಆಕೆಯನ್ನು ಚಿತ್ರಿಸುತ್ತಾನೆ. ತಂದೆ ಕಣ್ವರ ಮೇಲೆ ಆಕೆಗಿರುವ ವಿಶೇಷ ಪ್ರೀತಿಗೌರವಗಳನ್ನು ಎತ್ತಿ ತೋರಿಸುತ್ತಾನೆ. ಪಾವನ ತಪೋವನದಲ್ಲಿ ಕನ್ಯೆಯರ ಸಹಜ ಮಧುರ ಜೀವನವನ್ನು ಮನಗಾಣಿಸಲೆಂದು ಆಕೆಗೆ ಅನಸೂಯೆ ಪ್ರಿಯಂವದೆಯರೆಂಬ ಓರುಗೆಯ ಸಖಿಯರಿಬ್ಬರನ್ನು ತರುತ್ತಾನೆ. ನಿಜವಾಗಿ ಕಾಳಿದಾಸನ ಶಕುಂತಲೆ ಪುಣ್ಯಾಶ್ರಮದ ಸುಕುಮಾರ ತರುಲತೆಗಳು, ಜಿಂಕೆಮರಿ, ಪುಟ್ಟಹಕ್ಕಿಗಳೊಡನೆ ತಾದಾತ್ಮ್ಯ ಪಡೆದು ತಾನೂ ಅವುಗಳಲ್ಲಿ ಒಂದೆನಿಸುತ್ತಾಳೆ. ಕಾಳಿದಾಸ ಇಲ್ಲಿ ಚಿತ್ರಿಸಿರುವ ಪ್ರಕೃತಿಯ ಸೌಂದರ್ಯ ಹಾಗು ಮಾಧರ್ಯಗಳ ವಾತಾವರಣವೇ ಸಮ್ಮೋಹಕವಾಗಿದೆ.

 ಹೀಗೆಯೇ ದುಷ್ಯಂತನ ಚಾರಿತ್ರದಲ್ಲಿ ರಾಜನಾದ ದುಷ್ಯಂತನಿಗೆ ಸಲ್ಲದ ಕ್ಷುದ್ರ ಮನೋಭಾವ, ಕಾಮಾಂಧತೆ, ಕಪಟ, ಮುಂತಾದುವಕ್ಕೆ ಸ್ವಲ್ಪವೂ ಎಡೆಯಿಲ್ಲದಂತೆ ಅವನನ್ನು ಉದಾತ್ತಗೊಳಿಸಲು ಕಾಳಿದಾಸ ಶ್ರಮಿಸಿದ್ದಾನೆ. ದುಷ್ಯಂತನಿಂದಾದ ಶಕುಂತಲಾಪರಿತ್ಯಾಗಕ್ಕೆ ಬೇರೊಂದು ಕಾರಣವನ್ನು ಕಲ್ಪಸಿದಲ್ಲದೆ ಇದು ಶಕ್ಯವಿರಲಿಲ್ಲ. ತನ್ನ ಪ್ರತಿಭೆಯ ಒಂದು ಸುಂದರ ನವೋನ್ಮೇಷದಿಂದ ಆತ ಸಿಟ್ಟಿನ ಬೆಂಕಿಯಾದ ದುರ್ವಾಸ ಋಷಿಯ ನೂತನ ಪಾತ್ರವನ್ನೇ ಸೃಷ್ಟಿಸಿ ದುಷ್ಯಂತನ ಪತ್ನೀಪರಿತ್ಯಾಗಕ್ಕೆ ದುರ್ವಾಶಾಪವನ್ನೇ ಪರಮಕಾರನವೆಂದು ಕಲ್ಪಿಸಿದ. ಅರಿಯದೆ ಶಕುಂತಲೆ ಒಮ್ಮೆ ಕಣ್ವಾಶ್ರಮದಲ್ಲಿ ಅತಿಥಿಯಾಗಿ ಬಂದಿದ್ದ ದುರ್ವಾಸನನ್ನು ಯಥೋಚಿತವಾಗಿ ಸತ್ಕರಿಸದೆ ಅವನ ಕೋಪವನ್ನು ಕೆರಳಿಸಿದ್ದಳು. ಪತಿ ನಿನ್ನನ್ನು ಗಮನಿಸದೆ ಹೋಗಲಿ ಎಂದು ಸಿಟ್ಟಿನ ಭರದಲ್ಲಿ ಆತ ಶಾಪ ಕೊಟ್ಟಿದ್ದ. ಆಗ ಶಕುಂತಲೆ ಇನ್ನೂ ಗರ್ಭಿಣಿ. ಈ ವೃತ್ತಾಂತ ಆಕೆಗೆ ಗೊತ್ತಾಗಲಿಲ್ಲ. ಅವಳ ಸಖಿಯರಿಗೆ ಮಾತ್ರ ಗೊತ್ತಿತ್ತು. ಸಖಿಯರು ಬೇಕೆಂದೇ ಶಕುಂತಲೆಗೆ ಅದನ್ನು ತಿಳಿಸಲಿಲ್ಲ. ಅದಕ್ಕೆ ಪ್ರತಿಯಾಗಿ, ಅವರು ದುರ್ವಾಸರ ಕಾಲಿಗೇ ಬಿದ್ದು, ಅವರಿಂದ ಅಭಯ ಪಡೆದಿದ್ದರು-ದುಷ್ಯಂತ ನಿತ್ತ ಉಂಗುರವನ್ನು ತೋರಿಸಿದೊಡನೆ ಶಕುಂತಲೆಯನ್ನು ಆತ ಗುರುತಿಸುವನು-ಎಂದು, ಹೀಗೆ ನಾಟಕದಲ್ಲಿ ಅಭಿಜ್ಞಾನ ಅಥವಾ ಉಂಗುರ ಶಕುಂತಲೆಯ ದೈವದ ಸಂಕೇತ ಅಥವಾ ಪ್ರತಿನಿಧಿಯಾಗಿದೆ. ಇದನ್ನು ಕಾಳಿದಾಸನ ಪ್ರತಿಕೌಶಲದ ಪರಮದೃಷ್ಟಾಂತವೆನ್ನಬಹುದು. ಉಂಗುರಕ್ಕೆ ಈ ಸಾಂಕೇತಿಕವಾದ ವಿಶೇಷಾರ್ಥವಿರುವುದೆಂದು ನಮಗೆ ಸೂಚಿಸುವುದಕ್ಕಾಗಿಯೇ ಆತ ನಾಟಕಕ್ಕೆ ಅಭಿಜ್ಞಾನ ಶಾಕುಂತಲವೆಂದು ಹೆಸರಿಟ್ಟು ಅದಕ್ಕೆ ಮಹತ್ತ್ವದ ಸ್ಥಾನವಿತ್ತಿದ್ದಾನೆ. ಈ ಉಂಗುರ ನಾಟಕದುದ್ದಕ್ಕೂ ನಾಯಕನಾಯಕಿಯರ ಭಾಗ್ಯಪರಿವರ್ತನೆಯಲ್ಲಿ ಕಣ್ಣು ಮುಚ್ಚಾಲೆಯಾಟವನ್ನು ಮತ್ತೆ ಮತ್ತೆ ಆಡುತ್ತದೆ.

 ಪ್ರಥಮಾಂಕದಲ್ಲಿ ಕನ್ನೆಯರು ದುಷ್ಯಂತನ ಗುರುತನ್ನು ಹಿಡಿಯಲು ಸಹಾಯ ಮಾಡುತ್ತದೆ. ಈ ದುಷ್ಯಂತ ನಾಮಾಂಕಿತವಾದ ಉಂಗುರ. ಅಂಕದ ಕಡೆಗೆ ದುಷ್ಯಂತನೇ ಅದನ್ನು ಶಕುಂತಲೆಯ ಕೈಗೆ ಇಡುತ್ತಾನೆ-ತೋರಿಕೆಗೆ ಅವಳು ತನ್ನ ಸಖಿಯರಿಗೆ ಗಿಡಗಳ ನೀರೆರೆದು ತೀರಿಸಬೇಕಾಗಿರುವ ಸಾಲಕ್ಕೆ ಪ್ರತಿಯಾಗಿ, ವಸ್ತುತಃ ಅವನ ಅನುರಾಗದ ಪ್ರತಿನಿಧಿಯಾಗಿ ಕಣ್ವಾಶ್ರಮದಲ್ಲಿ ಶಕುಂತಲೆ ಇರುವವರೆಗೂ ಅವಳ ಕೈಯಲ್ಲಿಯೇ ಉಂಗುರ ಇತ್ತು. ಅದರೆ ಅವಳು ಪತಿಗೃಹಕ್ಕೆ ಹೊರಟಾಗ ದಾರಿಯಲ್ಲಿ ಸ್ನಾನಕ್ಕೆಂದಿಳಿದ ಶಚೀತೀರ್ಥದಲ್ಲಿ ಅವಳ ಕೈಯಿಂದ ಕಳಚಿಬಿದ್ದು ಮೀನಿನ ಹೊಟ್ಟೆಯನ್ನು ಸೇರಿತು. ದುಷ್ಯಂತನಿಗೆ ತಾನು ಪತ್ನಿಯೆಂದು ಪ್ರಮಾಣಿಸುವ ಏಕೈಕ ಸಾಕ್ಷಿಯಾದ ಈ ಉಂಗುರ ಅಸ್ಥಾನದಲ್ಲಿ ಅವಳ ಕೈಲಿಲ್ಲದೆ ಪೇಚಿಗೆ ಕಾರಣವಾಯಿತು. ಕಾಲಾಂತರದಲ್ಲಿ ಅದು ಮೀನುಗಾರನೊಬ್ಬನಿಗೆ ದೊರೆತು, ಅವನನ್ನು ಹಿಡಿದ ನಗರರಕ್ಷಕರ ಮೂಲಕವಾಗಿ ಮತ್ತೆ ದುಷ್ಯಂತನ ಬಳಿಗೇ ತಿರುಗಿ ಬಂತು. ಅದನ್ನು ಕಂಡೊಡನೆ ದುಷ್ಯಂತನಿಗೆ ಶಕುಂತಲೆಯ ನೆನಪು ಮರಳಿತು-ದುರ್ವಾಸರ ಶಾಪ ಮುಗಿದ ಪ್ರಯುಕ್ತ. ಆಗಿನ ಅವನ ತೀವ್ರ ವಿರಹ ಯಾತನೆ ಅವನ ಅಕಲ್ಮಷ ಪ್ರೇಮವನ್ನು ಕನ್ನಡಿಸುತ್ತದೆ. ದೇವತೆಗಳು ದಿವ್ಯ ಮಾರೀಚಾಶ್ರಮದಲ್ಲಿ ದುಷ್ಯಂತನಿಗೆ ಪತ್ನೀಪುತ್ರರ ಸಮಾಗಮವಾಗಲು ಸಹಾಯ ಮಾಡುತ್ತಾರೆ. ಆಗ ಮತ್ತೆ ಶಕುಂತಲೆಯ ಕೈಬೆರಳಿಗೇ ಅ ಉಂಗುರವನ್ನು ತೊಡಿಸಹೊರಟ ದುಷ್ಯಂತನನ್ನು ಕುರಿತು ಅದರ ಸಹವಾಸವೇ ತನಗಿನ್ನು ಬೇಡುವೆನ್ನುತ್ತಾಳೆ. ಶಕುಂತಲೆ.

 ಅತ್ಯಂತ ನಾಟಕೀಯವಾದ ವಸ್ತುಸಂವಿಧಾನದಲ್ಲಿ ಕಾಳಿದಾಸನ ಕಲಾಕೌಶಲವನ್ನು ಎತ್ತಿ ತೋರಿಸುವ ಈ ಪ್ರಮುಖ ವ್ಯತ್ಯಾಸಗಳಲ್ಲದೆ ಆತ ತನ್ನ ಪ್ರತಿಭೆಯಿಂದ ಮನೋಹರ ಪ್ರಕೃತಿ ವರ್ಣನೆಯ ದೃಶ್ಯಗಳನ್ನೂ ತನ್ನದೇ ಅದ ವಿಶಿಷ್ಟ ವ್ಯಕ್ತಿತ್ವವಿರುವ ಗೌಣಪಾತ್ರಗಳನ್ನೂ ಹೊಸದಾಗಿ ಸೃಷ್ಟಿಸಿಕೊಂಡಿದ್ಧಾನೆ. ನಾಲ್ಕನೆಯ ಅಂಕದ ಬೀಳ್ಕೊಡಿಗೆಯ ದೃಷ್ಯ ಒಂದು ಸುಂದರ ಭಾವಗೀತಾತ್ಮಕ ಭವ್ಯ ಸನ್ನೀವೇಶ. ಐದನೆಯ ಅಂಕದಲ್ಲಿ ಬರುವ ಪರಿತ್ಯಾಗದ ಶಿಖರಸನ್ನಿವೇಶಕ್ಕೆ ಇದು ಅತ್ಯಂತ ವಿಷಯವಾದ ಹಿನ್ನೆಲೆಯನ್ನು ಮಾರ್ಮಿಕವಾಗಿ ಮಾಡಿಕೊಡುತ್ತದೆ. ಒಂದೊಂದು ಮರಗಿಡಗಳನ್ನೂ ಮೃಗಪಕ್ಷಿಗಳನ್ನೂ ನೆಚ್ಚಿನ ಸಖಿಯರನ್ನೂ ಅಕ್ಕರೆಯ ತಂದೆಯನ್ನೂ ಅಗಲುವ 
ಶಕುಂತಲೆಯ ಕುರುಣಾಜನಕ ದೃಷ್ಯ ನಮ್ಮ ಹೃದಯವನ್ನು ತಟ್ಟನೆ ಮುಟ್ಟಿ ಅನುಕಂಪೆಯನ್ನು ಕೆರಳಿಸಲು ಆ ಮನೋಧರ್ಮದ ವಿಶ್ವಮಾನವೀಯತೆಯೇ ಕಾರಣ. ಅತ್ತ ತವರಿನ ಜಗತ್ತು, ಇತ್ತ ಕತ್ತಲೆ ಕವಿದ ಭವಿತವ್ಯದ ಜಗತ್ತು ಎರಡರ ನಡುವೆ ಅಂತರಾಳ ಸ್ಥಿತಿಯಲ್ಲಿ ತ್ರಿಶಂಕುವಿನಂತೆ ತೊಳಲುವ ಶಕುಂತಲೆಯ ದಃಖವನ್ನು ಕಂಡು ನಮ್ಮ ಹೃದಯ ಸಹಾನುಭೂತಿಯಿಂದ ಅವಳತ್ತಧಾವಿಸುತ್ತದೆ. ಹೀಗೆಯೇ ದಿವ್ಯ ಮಾರೀಚಾಶ್ರಮದ ಪ್ರಶಾಂತ ಹಾಗೂ ಪಾವನ ವಾತಾವರಣವಾದರೂ ನಮ್ಮ ಹೃದಯವನ್ನು ಪ್ರಶಾಂತ ಪ್ರಭೆಯಿಂದ ತುಂಬುತ್ತದೆ.

 ಗಯಟೆ, ಠಾಕೂರ್ ಮುಂತಾದ ವಿಶ್ವವಂದ್ಯ ಮಹಾಕವಿಗಳು ಉತ್ಸಾಹಾತಿಶಯದಿಂದ ಅಭಿಜ್ಞಾನ ಶಾಕುಂತಲ ನಾಟಕವನ್ನು ಮೆಚ್ಚಿ ಬಾಯ್ತುಂಬ ಕೊಂಡಾಡಿರುವುದರ ರಹಸ್ಯವೇ ಇದು. ನವ ವಸಂತದ ಕುಸುಮಸಂಪತ್ತು, ಮತ್ತು ಗ್ರೀಷ್ಮಋತುವಿನ ಫಲಸಮೃದ್ಧಿ, ದೇವಲೋಕದ ಸೊಬಗು ಮತ್ತು ಭೂಲೋಕದ ಚೆಲವು. ಅಷ್ಟೇಕೆ ಆತ್ಮತುಷ್ಟಿಯನ್ನು ನೀಡಬಲ್ಲ, ಸಂತೃಪ್ತಿಯನ್ನು ಈಯಬಲ್ಲ ಅಶೇಷ ವಿಶೇಷಗಳೆಲ್ಲವೂ ಶಾಕುಂತಲದಲ್ಲಿ ಸಂಗಮವಾಗಿದೆ ಎಂದು ಗಯಟೆ ಉದ್ಗರಿಸಿದ. ಇದರ ತಾತ್ಪರ್ಯವನ್ನು ಮಾರ್ಮಿಕವಾಗಿ ವಿವರಿಸುತ್ತ ಠಾಕೂರರು ಕುಸುಮಾವಸ್ಥೆಯಿಂದ ಹಿಡಿದು ಫಲಾವಸ್ಥೆಯವರೆಗೆ, ಭೂಲೋಕದ ಅಲ್ಪತೆ ದೇವಲೋಕದ ಪೂರ್ಣತೆಯಲ್ಲಿ ಪರ್ಯವಸಾನಗೊಳ್ಳುವವರೆಗೆ, ಭೌತಿಕ ಆಧ್ಯಾತ್ಮಿಕದಲ್ಲಿ ಐಕ್ಯಗೊಳ್ಳುವವರೆಗೆ ನಾವು ಕಾಣುವ ಕ್ರಮಿಕ ವಿಕಾಸವೇ ಈ ನಾಟಕದ ಜೀವಾಳವೆಂದು ಸ್ಪಷ್ಟಪಡಿಸಿದರು. ಒಂದು ಭೂಮಿಕೆಯಿಂದ ಇನ್ನೊಂದು ಭೂಮಿಕೆಯವರೆಗೆ ವಸ್ತುವನ್ನು ಪರಿಣತಗೊಳಿಸುವುದೇ-ಎಂದರೆ ಪ್ರೇಮವನ್ನು ಪ್ರಾಕೃತಿಕ ಸೌಂದರ್ಯದ ವಲಯದಿಂದ ಆಧ್ಯಾತ್ಮಿಕ ಸೌಂದರ್ಯದ ಶಾಶ್ವತ ಸ್ವರ್ಗಕ್ಕೆ ಏರಿಸುವುದೇ ನಾಟಕದ ಮೂಲೋದ್ದೇಶ. ಇದ್ದಕ್ಕಿದ್ದಂತೆ ಅಕಸ್ಮಾತ್ತಾಗಿ ಬೀಸಿದ ಯೌವನ ವಿಕಾರವೆಂಬ ಒಂದು ಸುಳಿಗಾಳಿ ಅವಳನ್ನು ಒಂದು ದುರ್ಬಲ ಕ್ಷಣದಲ್ಲಿ ದುಷ್ಯಂತನಿಗೆ ಒಪ್ಪಿಸಿತು. ಅಷ್ಟರಿಂದಲೇ ಆತ ಅವಳನ್ನು ನಿಜವಾಗಿ, ಪೂರ್ಣವಾಗಿ, ಒಲಿಸಿಕೊಂಡಂತಾಗಲಿಲ್ಲ. ಒಲುಮೆಯ ಪರಮ ಸಾಧನವೆಂದರೆ ಭಕ್ತಿ, ತಪಸ್ಯೆ. ಆದುದರಿಂದ ಕವಿ ಇಬ್ಬರು ಪ್ರಣಯಿಗಳೂ ಸುದೀರ್ಘ ಹಾಗು ಕಠಿಣ ಸಮಸ್ಯೆಯನ್ನು ಆಚರಿಸುವಂತೆ ಅಳವಡಿಸಿ, ಅವರು ಸತ್ಯವಾಗಿ, ಶಾಶ್ವತವಾಗಿ, ಪರಸ್ಪರ ಪ್ರೇಮದ ಪೂರ್ಣ ಪಾತ್ರತೆಯನ್ನು ಪಡೆಯುವಂತೆ ಮಾಡಿದ್ದಾನೆ. ಈ ನಾಟಕದ ವಿಶ್ವವ್ಯಾಪಿಯಾದ ಅಂತರಾರ್ಥವನ್ನು ಇದಕ್ಕಿಂತ ಉತ್ತಮವಾಗಿ ಬಣ್ಣಿಸುವುದು ಅಸಾಧ್ಯ. ಹೀಗೆ ಮೂಲ ಮಹಾಭಾರತದ ಉಪಾಖ್ಯಾನ ಕಥೆಯನ್ನು ಮಾರ್ಪಡಿಸಿ ನಾಯಕ ನಾಯಿಕೆಯರಿಬ್ಬರ ಪಾತ್ರಗಳನ್ನೂ ಉನ್ನತಗೊಳಿರುವುದಲ್ಲದೆ ಅವರ ಪ್ರೇಮವನ್ನು ಭೂಮಿಯಿಂದ ಸ್ವರ್ಗದವರೆಗೆ ಎಲ್ಲ ಅಂತಸ್ತುಗಳಲ್ಲಿಯೂ ಚಿತ್ರಸಿರುವುದು ಕಾಳಿದಾಸನ ಪ್ರತಿಭೆಯ ವೈಶಿಷ್ಟ್ಯವಾಗಿದೆ.

 ಇದರಂತೆಯೇ, ದಿವ್ಯ ಹಾಗು ಪಾವನವಾದ ಮಾರಿಚಾಶ್ರಮದಲ್ಲಿ ಬರುವ ಪುನಸ್ಸಮಾಗಮದ ಸನ್ನಿವೇಶ ಕೂಡ ಕಾಳಿದಾಸನ ಉಜ್ಜಲ ಪ್ರತಿಭಾ ಸಾಮಥ್ರ್ಯಕ್ಕೆ ಇನ್ನೊಂದು ನಿದರ್ಶನವಾಗಿದೆ. ಇಲ್ಲಿ ಪ್ರತ್ಯಭಿಜ್ಞೆ ಕ್ರಮ ಕ್ರಮವಾಗಿ ಉಂಟಾಗುತ್ತದೆ. ತನಗೊಬ್ಬ ವಂಶದ ಕುಡಿಯಾದ ಮಗನಾದಾನೇ ಎಂದು ಹಾರೈಸಿ ಹಂಬಲಿಸುತ್ತಿರುವ ದುಷ್ಯಂತನಿಗೆ ಕ್ರಮಕ್ರಮವಾಗಿ ಸಿಂಹದ ಮರಿಯೊಡನೆ ಆಡುತ್ತಿರುವ ಆ ಹುಡುಗನೇ ತನ್ನ ಮಗನೆಂಬ ಅರಿವಾಗುತ್ತದೆ. ಆ ಹುಡುಗನ ಮೂಲಕ ಅವನ ತಾಯಿಯಾದ ಶಕುಂತಲೆಯ ಗುರುತೂ ಹತ್ತುತ್ತದೆ. ಆಕೆಯಂತೂ ಅವನ ಪೌರುಷ್ಯವನ್ನೆಲ್ಲ ಮರೆತು ಕ್ಷಮೆಯನ್ನು ವರ್ಷಿಸಲು ಮುಂದಾಗುವ ಪ್ರಾಣ ಕಾಂತೆಯಾಗಿ ತೊಳಗುತ್ತಾಳೆ. ಅಲ್ಲಿಯ ಶಾಂತತಪೋವನದ ಅತಿಮಾನುಷ ಹಿನ್ನೆಲೆಯಲ್ಲಿ ಇದರ ಸಂಭಾವ್ಯತೆಯೂ ಸಹಜವಾಗಿ ಸಿದ್ಧಿಸುತ್ತದೆ. ಇದೇ ರೀತಿ ಹಿಂದೊಮ್ಮೆ ಕಾಳಿದಾಸನ ಪ್ರತಿಭೆ ಅತಿಮಾನುಷ ಘಟನೆಯನ್ನು ತಂದು ಶಕುಂತಲೆಯನ್ನು ಅತಿ ವಿಷಮವಾದ ಪರಿಸ್ಥಿತಿಯಿಂದ ಪಾರುಮಾಡಿತ್ತು-ದುಷ್ಯಂತನಿಂದ ತಿರಿಸ್ಕøತೆಯಾದ ಶಕುಂತಲೆಯನ್ನು ಮಾರೀಚಾಶ್ರಮಕ್ಕೆ ಒಯ್ಯಲು ಶಕುಂತಲೆಯ ತಾಯಿ ಮೇನಕೆ ತನ್ನ ಸಖಿ ಸಾನುಮತಿಯನ್ನು ಕಳಿಸಿದಳೆಂದು ವರ್ಣಿಸಿದಾಗ. ಹೀಗೆ ಇಡಿಯ ನಾಟಕ ಸಾಗುವುದು ದೈವಮಾನುಷ ಹಿನ್ನಲೆಯಲ್ಲಿ ಋಷಿಗಳೂ ದೇವತೆಗಳೂ ಮಾನವಲೋಕದ ಪ್ರೇಮಿಗಳನ್ನು ಪರೀಕ್ಷಿಸುತ್ತ, ಒಮ್ಮೆ ಸಹಾಯ ಮಾಡುತ್ತ, ಒಮ್ಮೆ, ವಿಘ್ನವೊಡ್ಡುತ್ತ ಇರುತ್ತಾರೆ. ಮಾನವ ಪಾತ್ರಗಳಾದರೂ ವಾಸ್ತವಿಕ ಜೀವನದ ಸಂಕುಚಿತ ಪರಿಮಿತಿಗಿಂತ ಎಷ್ಟೋ ಮೇಲೆ ಇರತಕ್ಕವರು. ನಾಯಕ ನಾಯಿಕೆಯರಿಬ್ಬರೂ ಒಮ್ಮೊಮ್ಮೆ ಭೂಲೋಕದಿಂದ ದೇವಲೋಕಕ್ಕೆ ಗಮನಾಗಮನವುಳ್ಳವರು. ಪ್ರಧಾನ ಪಾತ್ರಗಳ ಈ ಪೌರಾಣಿಕ ಹಾಗು ದೇವಮಾನುಷ ಅಂಶಗಳನ್ನು ಮರೆತು ಇಂದಿನ ವಾಸ್ತವಿಕ ಸಾಹಿತ್ಯವಿಮರ್ಶೆಯ ಅಳತೆಗೋಲಿಂದ ಪಾತ್ರಗಳನ್ನು ವಿವೇಚಿಸಿದರೆ ಕಾಳಿದಾಸನ ಮೂಲತಾತ್ಪರ್ಯಕ್ಕೇ ಲೋಪ ಬಂದೀತು.

 ವಾಸ್ತವಿಕತೆಯ ಅಂಶಗಳೂ ಸೇರ್ಪಡೆಯಾಗಿ ನಾಟಕದ ಸ್ವಾರಸ್ಯ ಹೆಚ್ಚಲೆಂದೇ ಕಾಳಿದಾಸ ಗೌಣಪಾತ್ರಗಳನ್ನು ಸೃಷ್ಟಿಸಿ ತನ್ನ ಜಾಣ್ಮೆಯನ್ನು ಮೆರೆದಿದ್ದಾನೆ. ಇಲ್ಲಿ ಹಾಸ್ಯಗಾರನಾದ ವಿದೂಷಕನಿಗೆ ನಾಯಕನ ಶೃಂಗಾರ ವೃತ್ತಾಂತದಲ್ಲಿ ಯಾವ ಕೈವಾಡವೂ ಇಲ್ಲ. ಶಕುಂತಲೆಯ ಇಬ್ಬರು ಸಖಿಯರಲ್ಲಿ ಅನುಸೂಯೆಯ ಸ್ವಭಾವ ಗಂಭೀರ ಹಾಗು ಮೃದು; ಪ್ರಿಯಂವದೆಯದು ನಕ್ಕು ನಗಿಸುವ, ಮಾತನ್ನು ಹುರಿಯುವ ಮನೋಧರ್ಮ, ಶಕುಂತಲೆಯ ಶಾಪ ವೃತ್ತಾಂತವನ್ನು ಕೂಡ ಇವರು ಆಕೆಗೆ ತಿಳಿಸಲಿಲ್ಲವೆಂಬ ಸನ್ನಿವೇಶ ರಚನೆಯಿಂದ ವಿಷಮ-ಸಂಘಟನೆಯ (ಡ್ರಮ್ಯಾಟಿಕ್ ಐರನಿ) ನಾಟಕ ತಂತ್ರವನ್ನು ಕವಿ ಯಶಸ್ವಿಯಾಗಿ ಬಳಸಿದ್ದಾನೆ. ಕಣ್ವ ಋಷಿಗಳ ಇಬ್ಬರು ಶಿಷ್ಯರಲ್ಲಿಯೂ ಪರಸ್ಪರ ಸೂಕ್ಷ್ಮ ವೈಲಕ್ಷಣ್ಯಗಳಿವೆ. ಶಾಙ್ರ್ಗರವ ಮುಂಗೋಪಿ ಮತ್ತು ತನ್ನದೇ ಸರಿಯೆಂದುವಾದಿಸುವವ; ಅದರೆ ಶಾರದ್ವತನದ ಪ್ರಸನ್ನ ಹಾಗು ಗಂಭೀರ ಪ್ರಕೃತಿ. ಕಾಳಿದಾಸ ಚಿತ್ರಿಸಿರುವ ಮೀನುಗಾರನೂ ಅವನನ್ನು ಹಿಡಿದು ಗೋಳಿಡಿಸುವ ನಗರಕ್ಷಕರೂ ಕವಿಯ ವಾಸ್ತವಿಕ ಪ್ರಜ್ಞೆ ಹಾಗು ಹಾಸ್ಯ ಪ್ರವೃತ್ತಿಗಳಿಗೆ ಉತ್ತಮ ನಿದರ್ಶನಗಳು. ಹೀಗೆ ಅಭಿಜ್ಞಾನ ಶಾಕುಂತಲ ಸರ್ವಾಂಗಸುಂದರವಾದ ನಾಟಕರತ್ನವೆನಿಸಿದೆ.         (ಕೆ.ಕೆ.)

 ಸಮಾರೋಪ: ಕಾಳಿದಾಸನ ಕೃತಿಗಳಲ್ಲಿ ಕಂಡುಬರುವ ಪ್ರಕೃತಿಯ ಮನಮೋಹಕ ವರ್ಣನೆಗಳು ಸಹೃದಯರ, ವಿಮರ್ಶಕರ ಮನಸೆಳೆದಿವೆ. ಅವನ ಪ್ರತಿಭೆ, ಕಲ್ಪನಾಶಕ್ತಿಗೆ ಮಿತಿಯೇ ಇಲ್ಲ. ಪ್ರಕೃತಿಯನ್ನು ಅನೇಕ ಸಂದರ್ಭಗಳಲ್ಲಿ ವರ್ಣಿಸಿದ್ದರೂ ಒಂದೊಂದು ಸಲವೂ ಹೊಸ ಹೊಸ ಭಾವವನ್ನೇ ಆತ ವ್ಯಕ್ತಗೊಳಿಸಿರುತ್ತಾನೆ. ಪ್ರಕೃತಿ ಚಿತ್ರವೇ ಏಕೆ, ಮಾನವರ ಮನೋಭಾವ. ಅದಕ್ಕೆ ತಕ್ಕ ವ್ಯಾಪಾರಗಳನ್ನು ಸಂಪೂರ್ಣವಾಗಿ ತಿಳಿದಿದ್ದು ಶಬ್ದಗಳ ಮೂಲಕ ಅವು ಸಹೃದಯರ ಅನುಭವಕ್ಕೂ ಬರುವಂತೆ ಚಿತ್ರಿಸುತ್ತಾನೆ. ಶಿವನಿಗೆ ಪಾರ್ವತಿಯನ್ನು ಕೊಟ್ಟು ಮದುವೆ ಮಾಡೆಂದು ಸಪ್ತರ್ಷಿಗಳು ಪರ್ವತರಾಜನೊಡನೆ ಹೇಳುತ್ತಿದ್ದಾಗ ಆತನ ಪಕ್ಕದಲ್ಲಿ ನಿಂತಿದ್ದ ಪಾರ್ವತಿ ತಲೆಬಾಗಿ ಕೈಯಲ್ಲಿದ್ದ ಕಮಲ ಪುಷ್ಪದ ದಳಗಳನ್ನು ಎಣಿಸುತ್ತಿದ್ದಳಂತೆ. ಪಾರ್ವತಿ ಲಜ್ಜಾಶೀಲೆ ಎಂಬುದನ್ನು ಇಲ್ಲಿ ಕವಿ ಕುಶಲತೆಯಿಂದ ಹೊರಗೆಡಹಿದ್ಧಾನೆ.

 ರಘುವಂಶದ 9ನೆಯ ಸರ್ಗವೊಂದನ್ನು ಬಿಟ್ಟರೆ ಮತ್ತೆಲ್ಲಿಯೂ ಕಾಳಿದಾಸ ಚಿತ್ರಕಾವ್ಯದ ರಚನೆಗೆ ಯತ್ನಿಸಿಲ್ಲ. ಈತ ಚಿತ್ರಗಳಿಂದ ತನ್ನ ಪ್ರತಿಭೆಯನ್ನು ಹೊರಪಡಿಸಲು ಇಚ್ಚಿಸಲಿಲ್ಲ. ಪದಗಳು, ವೃತ್ತಗಳು ಮನಸ್ಸಿನಲ್ಲಿರುವ ಅರ್ಥಭಾವಗಳಿಗೆ ತಕ್ಕಂತೆ ತಾವಾಗಿಯೆ ಈ ಕವಿಯಲ್ಲಿ ಹೊರ ಹೊಮ್ಮುತ್ತವೆ. ಶಿವನ ತಪೋಭಂಗವಾಗದಂತೆ ತೋರಿದಾಗ ಕುಟೀರವ ಬಾಗಿಲಿನಲ್ಲಿ ನಿಂತ ನಂದಿ ತನ್ನ ಬಾಯ ಮೇಲೆ ಬೆರಳಿಟ್ಟನೋ ಇಲ್ಲವೊ ಎಲ್ಲ ಬಾಹ್ಯಕ್ರಿಯೆಯೂ ಸ್ತಬ್ಧವಾಯಿತಂತೆ. ಮರಗಳು ಸಹ ಅಲ್ಲಾಡಲಿಲ್ಲ. ಈ ಶ್ಲೋಕವನ್ನು ಓದುತ್ತಿರುವಾಗ ಒಂದು ಕ್ಷಣ ನಮಗೂ ಅದೇ ಅನುಭವ ಬರುತ್ತದೆ.

 ಕಾಳಿದಾಸ ಯಾವ ಒಂದು ತತ್ತ್ವವನ್ನು ಪ್ರತಿಪಾದಿಸಲು ಯತ್ನಿಸದಿದ್ದರೂ ಅವನ ಕೃತಿಗಳಲ್ಲೆವೂ ಒಂದು ದಾರ್ಶನಿಕ ಹಿನ್ನೆಲೆಯಲ್ಲಿಯೇ ರೂಪುಗೊಂಡಿವೆ, ಕಾಳಿದಾಸನಿಗೆ ಪ್ರಕೃತಿಯೇ ದೇವತೆ, ಅದೇ ಅವನಿಗೆ ಪ್ರಾಣ. ಮೂರು ಲೋಕಗಳೂ ಪ್ರಕೃತಿಯಲ್ಲೇ ಅಡಗಿವೆ. ನಗರ ಸಹ ಪ್ರಕೃತಿಯ ಒಂದು ಮುಖ. ಪ್ರಕೃತಿ ಮಾನವನ ಮೇಲೆ ಪ್ರಭಾವ ಬೀರುವುದು. ಮಾನವನ ಮನೋವೃತ್ತಿಯಿಂದ ಪ್ರಕೃತಿ ಪ್ರಭಾವಿತವಾಗುವುದು. ಯಕ್ಷಪತ್ನಿಯ ವಿರಹಾವಸ್ಥೆಯನ್ನು ಕಂಡು ಮೋಡ ಕಣ್ಣೀರಿಡುವುದು; ಅರಣ್ಯದಲ್ಲಿ ಪರಿತ್ಯಕ್ತಳಾದ ಸೀತೆಯ ಸ್ಥಿತಿಯನ್ನು ಕಂಡು ಸುತ್ತಮುತ್ತಲಿನ ಚೇತನಾಚೇತನ ಪದಾರ್ಥಗಳೆಲ್ಲವೂ ಆಕೆಯೊಡನೆ ಸಮವಾದ ದುಃಖವನ್ನು ಅನುಭವಿಸುವುವು.

 ನೃತ್ಯಂ ಮಯೂರಾಃ ಕುಸುಮಾನಿ ವೃಕ್ಷಾಃ

 ದರ್ಭಾನುಪಾತ್ತಾನ್ ವಿಜಹುರ್ಹರಿಣ್ಯಃ |

 ತಸ್ಯಾಃ ಪ್ರಪನ್ನೇ ಸಮದುಃಖಭಾವಂ

 ಅತ್ಯಂತ್ಯಮಾಸೀದ್ ರುದಿತಂ ವನೇಷಿ || (ರಘುವಂಶ)

ಪ್ರಕೃತಿ ಹೀಗೆ ಮಾನವನ ಸುಖದುಃಖಗಳಲ್ಲಿ ಸಮಭಾಗಿ.

 ಕಾಳಿದಾಸನ ಅಭಿಮತದಲ್ಲಿ ಆದರ್ಶಪ್ರೇಮವೆಂಬುದು ಪರಸ್ಪರ ಅನುರಾಗದಿಂದಲಾಗಲೀ ಸಂಭೋಗಿದಿಂದಲಾಗಲೀ ವ್ಯಕ್ತವಾಗುವುದಲ್ಲ. ವಿಪ್ರಲಂಭವೆಂಬುದು ಪ್ರೇಮಕ್ಕೆ ಪುಟವಿಟ್ಟಂತೆ. ಆ ಪರಿಸ್ಥಿತಿಯನ್ನು ದಾಟಿ ಬಂದರೇ ಅದು ಆದರ್ಶ ಪ್ರೇಮವಾಗುವುದು ಅಲ್ಲದೆ ಇಂಥ ಪ್ರೇಮಕ್ಕೆ ರೂಪಲಾವಣ್ಯಗಳು ಸಹಾಯಕವಲ್ಲ. ಮನಃಪ್ರವೃತ್ತಿ, ಗುಣ-ಇವೇ ಇದಕ್ಕೆ ಮುಖ್ಯ ಕಾರಣ. ಹೀಗೆ ಏಕಪತ್ನೀತ್ವದ ಮೇಲೆ ನಿಂತಿರುವ ಸಾತ್ತ್ವಿಕವಾದ ಈ ಪ್ರೇಮದ ಕೊನೆಯ ಮೆಟ್ಟಲು ಪ್ರಿಯ ಪ್ರೇಯಸಿಯರ ಐಕ್ಯ-ಅರ್ಧನಾರೀಶ್ವರತ್ವ. ಮೇಲಾಗಿ ಪುತ್ರರತ್ನಜನನ ಈ ಶ್ರೇಷ್ಠ ದಾಂಪತ್ಯದ ಫಲವೆಂದು ಕಾಳಿದಾಸನ ದೃಢನಂಬಿಕೆ. ಈ ಚಿತ್ರಣದಲ್ಲಿಯೂ ಸ್ತ್ರೀಪಾತ್ರಕ್ಕೆ ಕವಿ ವಿಶೇಷ ಗಮನ ಇತ್ತಿದ್ದಾನೆ. ಆದರ್ಶ ಪ್ರೇಯಾಸಿಯಾದವಳು ಆದರ್ಶ ಗೃಹಿಣಿಯೂ ಆಗಬೇಕೆಂದು ಕಾಳಿದಾಸ ಶಾಕುಂತಲದಲ್ಲಿ ಹೇಳುವಂತಿದೆ. ಆಶ್ರಮವಾಸಿಗಳಾದರೂ ಧೀಮಂತರಾದುದರಿಂದ ಲೌಕಿಕವನ್ನು ಬಲ್ಲ ಕಣ್ವರ ಬಾಯಲ್ಲಿ ಒಂದೇ ಶ್ಲೋಕದಲ್ಲಿ ಭಾರತೀಯ ಗೃಹಿಣಿಯರ ಚರಿತ್ರೆಯನ್ನೇ ಬಟ್ಟಿಯಿಳಿಸಿ ಹೇಳಿದ್ದಾನೆ. ಇಂದಿಗೂ ಸ್ತ್ರೀಸಮುದಾಯಕ್ಕದು ಘನತಮ ಬುದ್ಧಿವಾದವಾಗಿದೆ.

 ಕಾಳಿದಾಸನ ಮನಸ್ಸು ಭೋಗಾಸಕ್ತಿಯ ಕಡೆಗೆ ಬಾಗಿದ್ದರೂ ಸುಖವೂ ದುಃಖವೂ ಸಮ, ಯಾವುದೂ ಶಾಶ್ವತವಲ್ಲ-ಎಂದು ಆತ ತಿಳಿದಿದ್ದನೆಂದು ಹೇಳಬಹುದು. ಸುಖವನ್ನನುಭವಿಸುವಾಗ ಹಿಗ್ಗುವುದಾಗಲೀ ದುಃಖ ಬಂದಾಗ ಕುಗ್ಗುವುದಾಗಲೀ ಕವಿಗೆ ಹಿಡಿಸುವುದಿಲ್ಲ. ಕಾಳಿದಾಸ ಶೃಂಗಾರವನ್ನು ಚಿತ್ರಿಸುವುದರಲ್ಲಿ ಅಗ್ರಗಣ್ಯನಾದರೂ ಅವನ ಕಾವ್ಯಗಳು ನಾಲ್ಕು ಗೋಡೆಗಳ ಮಧ್ಯದಲ್ಲಿಯೋ ಪ್ರೇಮದ ವನದಲ್ಲಿಯೇ ನಿರ್ಜನವಾದ ಪ್ರಕೃತಿಯ ಮಡಿಲಲ್ಲಿಯೋ ಇರುವಂತೆ ತೋರಿದರೂ ಮಾನವನ ಮನಸ್ಸಿನ ಏರಿಳಿತಗಳನ್ನು ಕವಿ ಚೆನ್ನಾಗಿ ಅರಿತಿದ್ದ ಮತ್ತು ಅವನ್ನು ಕಾವ್ಯದಲ್ಲಿ ಸಹೃದಯರಿಗೆ ಹೃದಯಂಗಮವಾಗುವಂತೆ ಹಿಡಿದಿಡಲು ಸಮರ್ಥನಾಗಿದ್ಧ. ಒಟ್ಟಿನಲ್ಲಿ ಕಾಳಿದಾಸ ಆಶಾವಾದಿ; ಧರ್ಮಶ್ರದ್ಧೆ ಮತ್ತು ದೈವಭಕ್ತಿಯುಳ್ಳ ಶ್ರೇಷ್ಠ ಕವಿ.

 ತನ್ನ ಕಾವ್ಯಗಳಲ್ಲಿ ವಿಶ್ವಸಾಮಾನ್ಯ ಧರ್ಮಗಳು ಪ್ರತಿಪಾದಿತವಾಗಿರುವುದರಿಂದ ವಿಶ್ವಸಾಹಿತ್ಯದಲ್ಲಿ ಕಾಳಿದಾಸ ಗಣ್ಯಸ್ಥಾನ ಪಡೆದಿದ್ದಾನೆ. ಕವಿಕುಲಗುರವಾಗಿದ್ದ ಆತನ ಪ್ರಭಾವ ಅವನ ಅನಂತರದವರ ಮೇಲೆ ಹೇರಳವಾಗಿ ಬಿದ್ದಿದೆ. ಯಾವ ಕವಿಯೂ ಕಾಳಿದಾಸನಿಂದ ಸ್ಫೂರ್ತಿ ಪಡೆಯದೇ ಇಲ್ಲ. ಭಾರವಿ, ಬಾಣ, ಭವಭೂತಿಗಳಲ್ಲಿ ಅವನ ಪ್ರಭಾವ ಸ್ಪಷ್ಟವಾಗಿದೆ. ಹಲವರು ಅವನನ್ನು ಅನುಸರಿಸಲು ಪ್ರಯತ್ನಿಸಿರುವುದು ಕಾಳಿದಾಸನ ಉತ್ತಮತೆಗೆ ನಿದರ್ಶನ. ಕೆಲವರಂತೂ ಅವನ ಕಾವ್ಯದಿಂದಲೇ ಅನೇಕ ಭಾವಗಳನ್ನೂ ಶೈಲಿಯನ್ನೂ ಮಾತುಗಳನ್ನೂ ತೆಗೆದುಕೊಂಡಿದ್ದಾರೆ. ಕಾಳಿದಾಸನಂಥ ಕವಿಶ್ರೇಷ್ಠ ಇದುವರೆವಿಗೂ ಹುಟ್ಟಲಿಲ್ಲ; ಅದ್ಯಾಪಿ ತತ್ತುಲ್ಯಕವೇಃ ಅಭಾವಾತ್-ಎಂಬ ಮಾತು ಇಂದಿಗೂ ನಿಂತುಹೋಗಿದೆ.       (ಎಸ್.ಆರ್.ಎ.)

 ಕನ್ನಡದಲ್ಲಿ ಕಾಳಿದಾಸ: ನೃಪತುಂಗ, ಪಂಪ, ಪೊನ್ನ, ಹರಿಹರ, ದುರ್ಗ ಸಿಂಹ, ನಾಗವರ್ಮ ಮುಂತಾದ ಹಳಗನ್ನಡ ಮಹಾಕವಿಗಳೆಲ್ಲ ಕಾಳಿದಾಸನ ಕಾವ್ಯ ನಾಟಕಗಳ ಪರಿಚಯವನ್ನು ಮಾಡಿಕೊಂಡು ಕಾಳಿದಾಸನ ಕಾವ್ಯ ನಾಟಕಗಳ ಪರಿಚಯವನ್ನು ಮಾಡಿಕೊಂಡು ಕಾಳಿದಾಸನಿಂದ ಪ್ರಭಾವಿತರಾಗಿದ್ದರೆನ್ನಲು ಸಾಕಷ್ಟು ಆಧಾರಗಳು ದೊರೆಯುತ್ತವೆ. ಬಾಯಿ ತುಂಬ ಕಾಳಿದಾಸನನ್ನು ಹೊಗಳುವುದರ ಜೊತೆಗೆ ಪೊನ್ನನಂಥದವರು ಅವನ ಎಷ್ಟೋ ಪದ್ಯಗಳನ್ನು ತಮ್ಮ ಕಾವ್ಯಗಳಲ್ಲಿ ಕನ್ನಡಿಸಿಕೊಂಡಿದ್ದಾರೆ. ಆದರೆ ಕಾಳಿದಾಸನ ಇಡಿಯ ಕೃತಿಗಳನ್ನು ಸಮಗ್ರವಾಗಿ ಅನುವಾದ ಮಾಡುವ ಕಾರ್ಯ ಪ್ರಾರಂಭವಾದುದು 19ನೆಯ ಶತಮಾನದಲ್ಲಿಯೇ ಎಂದು ತೋರುತ್ತದೆ. ಮೈಸೂರು ರಾಜರಲ್ಲಿ ಆಸ್ಥಾನ ಪಂಡಿತರಾಗಿದ್ದ ಸಂಸ್ಕøತ ಕನ್ನಡ ಪಂಡಿತರೂ ಉತ್ತರ ಕರ್ಣಾಟಕದಲ್ಲಿ ಉಚ್ಚ ಶಿಕ್ಷಣ ಪಡೆದ ಲೇಖಕರೂ ತಂತಮ್ಮ ರೀತಿಯಿಂದ ಈ ಅವಧಿಯಲ್ಲಿ ಕಾಳಿದಾಸನ ಕೃತಿಗಳನ್ನೆಲ್ಲ ಕನ್ನಡಕ್ಕೆ ತಂದರು. ಮೈಸೂರು ಕಡೆಗೆ ಬಸವಪ್ಪಶಾಸ್ತ್ರಿಗಳ ಶಾಕುಂತಲ, ಸೋಸಲೆ ಅಯ್ಯಶಾಸ್ತ್ರಿಗಳ ವಿಕ್ರಮೋರ್ವಶೀಯ, ಧಾರವಾಡದ ಕಡೆ ಶಾಂತಕವಿ ಅಥವಾ ಸಕ್ಕರಿ ಬಾಳಾಚಾರ್ಯರ ಶಾಕುಂತಲ ಮತ್ತು ಶೇಷಗಿರಿ ರಾಮಚಂದ್ರ ಚುರಮುರಿ ಅವರ ಶಾಕುಂತಲ-ಇವು ಕನ್ನಡದಲ್ಲಿ ರಚಿತವಾಗಿ ಖ್ಯಾತಿಗೆ ಪಾತ್ರವಾದುವು. ಇದರಂತೆ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿಗಳ ಮೇಘದೂತ ಎಸ್.ಜಿ. ನರಸಿಂಹಾಚಾರ್ಯರ ಅಜನೃಪಚರಿತೆ ಮತ್ತು ದಿಲೀಪಚರಿತೆ ಇವನ್ನೂ ಇಲ್ಲಿ ಉಲ್ಲೇಖಿಸಬಹುದು.

 ಈ ಪ್ರಖ್ಯಾತ ಕೃತಿಗಳೆಲ್ಲ ಕನ್ನಡ ಸಾಹಿತ್ಯದಲ್ಲಿ ಪರಂಪರಾಗತವಾಗಿದ್ದ ಕಂದ, ವೃತ್ತಗಳ ಶೈಲಿಯಲ್ಲಿಯೋ ಇಲ್ಲವೆ ಷಟ್ಟದಿ ಶೈಲಿಯಲ್ಲಿಯೋ ಬರೆದಂಥವು. ನಾಟಕದಲ್ಲಿ ಬರುವ ಗದ್ದವೂ ಸ್ವಲ್ಪ ಜಟಿಲವಾಗಿರುವುದೇ ಹೆಚ್ಚು. ಆದರೂ ರಂಗಭೂಮಿಯ ಪ್ರಾಥಮಿಕಾವಸ್ಥೆಯಲ್ಲಿ ಈ ಅನುವಾದಗಳು ಹೆಚ್ಚಿನ ಜನಪ್ರಿಯತೆಗಳಿಸಲು ಅವುಗಳಲ್ಲಿ ಬರುತ್ತಿದ್ದ ಹೊಸ ಹೊಸ ಗೀತಾದಿ ರಚನೆಗಳೂ ಕಾರಣ. ಬಸವಪ್ಪಶಾಸ್ತ್ರಿಗಳಿಗೆ ಅಭಿನವ ಕಾಳಿದಾಸ ಎಂಬ ಆಸ್ಥಾನ ಪ್ರಶಸ್ತಿಯೇ ದೊರಕಿತು. ಅವರ ಅನುವಾದದಲ್ಲಿ ಸ್ವಂತ ಕವಿತೆಯೆನಿಸುವಷ್ಟು ಸಹಜವಾದ ದ್ರಾಕ್ಷಾಪಾಕವನ್ನೂ ಕಾಣಬಹುದು. ಮೂಲದ ಸ್ವಾರಸ್ಯಕ್ಕೆ ಎಲ್ಲಿಯೂ ಕುಂದಾಗದಂತೆ ಈ ಬಗೆಯ ಅನುವಾದ ಮೂಡುವುದಾದರೂ ಒಂದು ಸಾರಸ್ವತ ಸಿದ್ಧಿಯೇ ಸರಿ ಅವರದೇ ಇನ್ನೊಂದು ಅನುವಾದವಾದ ವಿಕ್ರಮೋರ್ವಶೀಯದಲ್ಲಿ ಈ ಬಗೆಯ ಅಪೂರ್ವ ಸಿದ್ಧಿ ಕಾಣಿಸದು. ಉತ್ತರ ಕರ್ಣಾಟಕದ ಕಡೆಗೆ ಚುರಮುರಿಯವರ ಶಾಕುಂತಲವೂ ತುಂಬ ಪ್ರಸಿದ್ಧಿಯನ್ನೈದಲು ಅವರ ಭಾಷೆಯ ಸೊಬಗೂ ಹಾಡುಗಳೂ ಕಾರಣವೆನ್ನಬಹುದು. ಇದೇ ರೀತಿಯ ಸಿದ್ಧಕವಿತಾಸಂಪತ್ತು ಕುಕ್ಕೆಯವರ ಮೇಘದೂತದಲ್ಲೂ ಕಾಣಸಿಗುತ್ತದೆ. ರಘುವಂಶದ ಕೆಲವೇ ಸರ್ಗಗಳ ಅನುವಾದವಾದರೂ ಅಜನೃಪಚರಿತೆ, ದಿಲೀಪ ಚರಿತೆಗಳು ಪಠ್ಯಪುಸ್ತಕಗಳಾಗುವಷ್ಟು ಪರಿಣಾಮಕಾರಿ ಷಟ್ಟದೀಪ್ರಯೋಗಗಳು.

 ಈ ಪ್ರಸಿದ್ಧ ಪದ್ಯಾನುವಾದಗಳಲ್ಲದೆ ಗದ್ಯರೂಪದಲ್ಲಿಯೂ ಕಾಳಿದಾಸನ ಕೃತಿ ಪರಿಚಯಗಳು ಈ ಕಾಲಕ್ಕೇ ಕನ್ನಡದಲ್ಲಿ ಮೊದಲಿಗೆ ಮೂಡಿ ಬಂದುವು. ಇವುಗಳಲ್ಲೆಲ್ಲ ಪ್ರಾಚೀನಾವಾದುವೆಂದರೆ ಮುಮ್ಮಡಿ ಕೃಷ್ಣರಾಜ ಒಡೆಯರ ಶಾಕುಂತಲ ನಾಟಕ ನವೀನ ಟೀಕೆ. ಬಿ. ಕೃಷ್ಣನವರ ಕನ್ನಡ ಶಾಕುಂತಲ. ಮೊದಲನೆಯದರಲ್ಲಿ ಮೂಲಕ್ಕಿಂತ ಹೆಚ್ಚಿನ ಎಷ್ಟೋ ಸಂಗತಿಗಳು ಸೇರಿಕೊಂಡಿದ್ದರೆ, ಎರಡನೆಯದಲ್ಲಿ ಪಾಂಡಿತ್ಯ ಪೂರ್ಣವಾದ ಪೀಠಿಕೆಯೂ ಇದೆ.

 ಇಷ್ಟು ಪ್ರಸಿದ್ಧಿಗೆ ಬಾರದ ಮತ್ತೆ ಕೆಲವು ಅನುವಾದಗಳಿವು: ಮಲ್ಲಿಕಾರ್ಜುನಪ್ಟ ಶಿವಲಿಂಗಪ್ಪ ರೈನಾಪುರ, ಅಥಣಿ-ಇವರ ಮೇಘದೂತ (ವಾರ್ಧಕ ಪಟ್ಟದಿ 1910): ಬಳ್ಳಾರಿ ವೈ. ನಾಗೇಶಶಾಸ್ತ್ರಿಗಳ ಕರ್ಣಾಟಕ ರಘುವಂಶ ಮತ್ತು ಕುಮಾರಸಂಭವ (1938); ಬಸವರಾಜಶಾಸ್ತ್ರೀ ಮಲ್ಲಿನಾಥಶಾಸ್ತ್ರೀ ಕೋಡಿಕೊಪ್ಪಮಠ, ಬಿಜಾಪುರ ಇವರ ರಘುವಂಶಸಾರ ಸಂಗ್ರಹ (1926); ಶಾಂತಕವಿಗಳ ಋತುಸಂಹಾರ; ಧೋಂಡೋ ನರಸಿಂಹ ಮುಳಬಾಗಿಲ ಅವರ ಮಾಳವಿಕಾಗ್ನಿಮಿತ್ರ (1897)-ಇವೆಲ್ಲ ಈಗ ಗ್ರಂಥ ಭಂಡಾರಗಳಲ್ಲಿ ಹುಡುಕಬೇಕಾಗಿರುವ ಅಪೂರ್ವ ಪ್ರತಿಗಳೆನಿಸಿವೆ.

 ಅಂಬಿಕಾತಯದತ್ತರು ಕನ್ನಡದಲ್ಲಿ ಒಂದು ವಿನೂತನ ಛಂದಸ್ಸನ್ನು ನಿರ್ಮಿಸಿ ಮೇಘದೂತವನ್ನು ಮೂಲಕ್ಕಿಂತ ಒಂದು ತೂಕ ಹೆಚ್ಚು ಎನಿಸಿವಂತೆ ಭಾವಾನುವಾದ ಮಾಡಿ ಅನುವಾದ ಕ್ಷೇತ್ರದಲ್ಲಿ ಒಂದು ವಿಕ್ರಮವನ್ನೇ ಸಾಧಿಸಿದ್ದಾರೆನ್ನಬಹುದು.

 ಈಚೆಗೆ ಸಮೇತನಹಳ್ಳಿ ರಾಮರಾಯರು ಕಾಳಿದಾಸನ ಶಾಕುಂತಲಾ ನಾಟಕವನ್ನು ಅಧರಿಸಿ ಸರಳ ರಗಳೆಯಲ್ಲಿ ಬೃಹತ್ ಕಾವ್ಯಾವೊಂದನ್ನು ರಚಿಸಿದ್ದಾರೆ.

 ಎಲ್ಲಕ್ಕಿಂತ ಹೆಚ್ಚಾಗಿ. ಕಾಳಿದಾಸನ ಸಕಲ ಕೃತಿಗಳನ್ನೂ ಆಧುನಿಕ ಕನ್ನಡಗದ್ಯ ಪದ್ಯಗಳಲ್ಲಿ ಸಂಪೂರ್ಣವಾಗಿ ಅನುವಾದಿಸಿದ ಯಶಸ್ಸು ಎಸ್. ವಿ. ಪರಮೇಶ್ವರ ಭಟ್ಟ ಅವರದು. ಅನುವಾದ ಪದ್ಯಗಳಲ್ಲಿ ಒಮ್ಮೊಮ್ಮೆ ಗದ್ಯಸರಣಿ ಬರುವ ಕೊರತೆಯನ್ನು ಬಿಟ್ಟರೆ ಅವು ಇಂದಿನವರಿಗೆ ತುಂಬ ಪ್ರಯೋಜಕವಾಗಿವೆ. ಕೆ. ಕೃಷ್ಣಮೂರ್ತಿ ಅವರು ಇತ್ತೀಚೆಗೆ ಶಾಕುಂತಲವನ್ನು ಹೊಸ ಗದ್ಯದಲ್ಲಿ ಬರೆಯುವ ಯತ್ನವನ್ನು ಮಾಡಿದ್ದಾರೆ.

 ಕಾಳಿದಾಸನ ವಿಮರ್ಶೆಯಲ್ಲಿಯೂ ಕನ್ನಡ ಶ್ರೀಮಂತವಾಗಿದೆಯೆನ್ನಬೇಕು. ಕೇವಲ ಕೆಲವು ಪ್ರಬಂಧಗಳನ್ನು ಬರೆದ ಮಾಸ್ತಿ. ತೀ. ನಂ. ಶ್ರೀ, ದ. ರಾ. ಬೇಂದ್ರೆ ಇವರನ್ನು ಬಿಟ್ಟರೂ ಒಂದೊಂದು ನಾಟಕವನ್ನು ಕೂಲಂಕಷವಾಗಿ ವಿಮರ್ಶೆಮಾಡಿ ಸ್ವತಂತ್ರ ಗ್ರಂಥಗಳನ್ನು ಬರೆದಿರುವ ಕೀರ್ತಿ ಎಸ್. ವಿ. ರಂಗಣ್ಣನವರದು. ಕಾಳಿದಾಸನ ಸಮಗ್ರ ಪರಿಚಯಕ್ಕಾಗಿ ಎಂ. ಲಕ್ಷ್ಮೀನರಸಿಂಹಯ್ಯನವರಂಥ ಉದ್ಧಾಮ ಪಂಡಿತರೂ ಸಿ.ಕೆ. ವೆಂಕಟರಾಮಯ್ಯನವರಂಥ ರಸಿಕರೂ ಆದ್ಯ ರಂಗಾಚಾರ್ಯರಂಥ ಮೇಧಾವಿಗಳೂ ಬೃಹದ್ಗ್ರಂಥಗಳನ್ನೇ ರಚಿಸಿದ್ದಾರೆ. ಸಾಹಿತ್ಯ ಚರಿತ್ರೆಯಲ್ಲಿ ತುಲನಾತ್ಮಕವಾಗಿ ಕಾಳಿದಾಸನ ಸ್ಥಾನವನ್ನು ಎ.ಆರ್. ಕೃಷ್ಣಶಾಸ್ತ್ರಿಗಳ ಸಂಸ್ಕøತ ನಾಟಕದಲ್ಲಿಯೂ ಕೆ. ಕೃಷ್ಣಮೂರ್ತಿ ಅವರ ಸಂಸ್ಕøತ ಕಾವ್ಯದಲ್ಲಿಯೂ ಬೆಲೆಕಟ್ಟಿ ನಿರ್ದೇಶಿಸಲಾಗಿದೆ. ಹೀಗೆ ಕನ್ನಡದಲ್ಲಿ ಕಾಳಿದಾಸನ ಗ್ರಂಥಗಳ ಪ್ರಚಾರ, ಅನುವಾದ ಕಾರ್ಯ ಒಂದು ನೂರು ವರ್ಷಗಳಿಂದಲೂ ಅವ್ಯಾಹತವಾಗಿ ಸಾಗಿದೆಯೆನ್ನಲಡ್ಡಿಯಿಲ್ಲ.            

   (ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ